ಕುಮಟಾ; ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ತಮ್ಮ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಕುಮಟಾದ ಹೆಗಡೆಯ 9 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳೊಂದಿಗೆ ಟ್ರಸ್ಟ್ ವತಿಯಿಂದ ಲೈಟರಗಳನ್ನು ಸಹ ವಿತರಿಸಿದರು. ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿಯವರು ಕಡುಬಡವರ ಮನೆಗಳಲ್ಲು ಸಹ ಎಲ್.ಪಿ.ಜಿ. ಗ್ಯಾಸ್ ಬಳಕೆಯಾಗಬೇಕು. ಆ ಮೂಲಕ ಹೊಗೆಮುಕ್ತ ಮನೆಗಳ ನಿರ್ಮಾಣದೊಂದಿಗೆ ಮಹಿಳೆಯರ ಸ್ವಾಸ್ಥ್ಯ ಹಾಗೂ ಅರಣ್ಯನಾಶ ಕಾಪಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಉಜ್ವಲದಂತಹ ಜನಪರ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇಂತಹ ಬಡವರ ಪರ ಯೋಜನೆಯನ್ನು ಪ್ರತಿ ಗ್ರಾಮೀಣ ಭಾಗದ ಬಡಜನರಿಗೆ ತಲುಪಿಸಬೇಕೆಂಬ ಆಶಯದೊಂದಿಗೆ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ ಕೂಲಿ ಕೆಲಸ ಬಿಟ್ಟು ಅಲೆಯದೇ ತಮ್ಮ ಮನೆಬಾಗಿಲಲ್ಲೇ ಪಡೆಯಬೇಕೆಂಬ ಉದ್ದೇಶದಿಂದ ತಮ್ಮ ಟ್ರಸ್ಟ್ ವತಿಯಿಂದ ಸಂಪೂರ್ಣ ಉಚಿತವಾಗಿ ಅವರ ಮನೆಯಂಗಳದಲ್ಲೇ ಈ ಯೋಜನೆಯ ಸೌಲಭ್ಯವನ್ನು ದೊರಕಿಸಿಕೊಡಲಾಗುತ್ತಿದೆ. ಅಡಿಗೆ ಅನಿಲ ಇಲ್ಲದೇ ಪರದಾಡುತ್ತಿದ್ದ ಮುಗ್ಧ ಗ್ರಾಮೀಣ ಜನರು ಗ್ಯಾಸ್ ಸಂಪರ್ಕ ಪಡೆದುಕೊಂಡಾಗ ವ್ಯಕ್ತಪಡಿಸುವ ಸಂತೋಷವನ್ನು ನೋಡಿದಾಗ ನಾವು ಮಾಡಿದ ಕಾರ್ಯ ಸಾರ್ಥಕವೆನಿಸುತ್ತದೆ ಹಾಗೂ ಇನ್ನೂ ಹೆಚ್ಚಿನ ಅನುಕೂಲತೆ ಒದಗಿಸಿ ಅವರ ಮುಖದಲ್ಲಿ ಮಂದಹಾಸವನ್ನು ನೋಡುವ ಆಶಯ ಇಮ್ಮಡಿಗೊಂಡಿದೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲೂ ತಮ್ಮ ಇತಿಮಿತಿಯಲ್ಲಿ ಜನರಿಗೆ ಸಹಾಯ ಸಹಕಾರಗಳನ್ನು ನೀಡುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿಯವರು ಮಾತನಾಡಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಪ್ರತಿಯೊಬ್ಬರೂ ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳಬೇಕು. ಇದೇ ಕಾರ್ಯಕ್ರಮ ಬೇರೆ ಯಾವುದೇ ಪಕ್ಷದಿಂದ ನಡೆದಲ್ಲಿ ಇದಕ್ಕೆ ಹಣ ವಸೂಲಿ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಪಕ್ಷದಿಂದ ಸಂಪೂರ್ಣ ಉಚಿತವಾಗಿ ಬಡವರಿಗೆ ಈ ಯೋಜನೆಯ ಸೌಲಭ್ಯವನ್ನು ತಲುಪಿಸಲಾಗುತ್ತಿದೆ ಎಂದರು.
ಪ್ರಗತಿ ವಿದ್ಯಾಲಯದ ಮುಖ್ಯಾಧ್ಯಾಪಕರಾದ ಎಮ್. ಜಿ. ಭಟ್ ಅವರು ಮಾತನಾಡಿ ಉರುವಲುಗಳಿಂದ ಮಹಿಳೆಯರ ಆರೋಗ್ಯದ ಮೇಲೆ ತೀರಾ ದುಷ್ಪರಿಣಾಮ ಉಂಟಾಗುತ್ತಿರುವುದನ್ನು ಅರಿತ ಪ್ರಧಾನಮಂತ್ರಿಯವರು ಉಜ್ವಲದಂತಹ ಅತ್ಯಗತ್ಯವಾದ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಸರಕಾರದ ಯಾವುದೇ ಯೋಜನೆಗಳು ಕಡುಬಡವರನ್ನು ತಲುಪುವುದು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಷ್ಟದಾಯಕವಾಗಿದೆ. ಆದರೆ ನಾಗರಾಜ ನಾಯಕ ತೊರ್ಕೆ ಅವರು ಫಲಾನುಭವಿಗಳಿಗೆ ಅನಾನುಕೂಲತೆ ಉಂಟಾಗಬಾರದು ಎಂಬ ಸದುದ್ದೇಶದಿಂದ ತಮ್ಮ ಟ್ರಸ್ಟ್ ವತಿಯಿಂದ ಎಲ್ಲಾ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯವನ್ನು ಅವರ ಮನೆಯಂಗಳದಲ್ಲಿಯೇ ಒದಗಿಸುತ್ತಿದ್ದಾರೆ. ಅಲ್ಲದೇ ಟ್ರಸ್ಟ್ ವತಿಯಿಂದ ಉಚಿತವಾಗಿ ಲೈಟರಗಳನ್ನು ಸಹ ವಿತರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ನಿಃಸ್ವಾರ್ಥ ಸೇವಾಮನೋಭಾವನೆಯ ನಾಯಕನಲ್ಲಿ ನಾವೆಲ್ಲ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂತೋಷ ನಾಯಕ, ಮಾಜಿ ಅಧ್ಯಕ್ಷರು, ಪುರಸಭೆ ಕುಮಟಾ , ಗ್ರಾ. ಪಂ. ಸದಸ್ಯೆ ಜಯಾ ಮುಕ್ರಿ ಮುಂತಾದವರು ಉಪಸ್ಥಿತರಿದ್ದರು.