ಕಾರವಾರ: ‘ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್ನಿಂದಾಗಿ ಮೀನುಗಳ ಸಂತತಿ ನಾಶವಾಗುತ್ತಿದ್ದು, ಅದನ್ನು ಜಿಲ್ಲೆಯಲ್ಲಿ ಶಾಶ್ವತವಾಗಿ ನಿಷೇಧಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾ ನಾಡ ದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧೆಡೆಯ ಸುಮಾರು ಸಾವಿರಕ್ಕೂ ಅಧಿಕ ಮೀನುಗಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಅವೈಜ್ಞಾನಿಕ ಮೀನುಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
‘ಕೇಂದ್ರ ಸರ್ಕಾರ ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೂ ಕೂಡ ಅದರ ವಿರುದ್ಧವಾಗಿ ಜಿಲ್ಲೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಇದು ಮೀನುಗಳ ಸಂತತಿಗೆ ಮಾರಕವಾಗಿದ್ದು, ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬದುಕು ಇದರಿಂದ ಬೀದಿಗೆ ಬರುವಂತಾಗಿದೆ’ ಎಂದು ಅಳಲು ತೋಡಿಕೊಂಡರು.
‘ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಕರಾವಳಿ ಜಿಲ್ಲೆ ಪ್ರಮುಖ ಪಾತ್ರ ವಹಿಸುತ್ತದೆ. ಲಕ್ಷಾಂತರ ಮೀನುಗಾರರು ಈ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ವೃತ್ತಿಗಳನ್ನು ತ್ಯಜಿಸುವ ಹಂತಕ್ಕೆ ಬಂದು ತಲುಪಿದ್ದಾರೆ’ ಎಂದು ಹೇಳಿದರು.
‘ಕರಾವಳಿ ತಾಲ್ಲೂಕಿನ ಲಕ್ಷಕ್ಕೂ ಅಧಿಕ ಮಂದಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಬಂಡವಾಳಶಾಹಿ ಮೀನುಗಾರರು ಲೈಟ್ ಫಿಶಿಂಗ್ ನಡೆಸುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿರುವವರಿಗೆ ಸಮಸ್ಯೆ ಉಂಟಾಗಿದೆ. ದೋಣಿಗಳಲ್ಲಿ ಹೆಚ್ಚಿನ ಅಶ್ವಶಕ್ತಿಯ ಎಂಜಿನ್ ಅಳವಡಿಕೆ, ಬುಲ್ಟ್ರಾಲ್ ಮೊದಲಾದ ಅತ್ಯಾಧುನಿಕ ಮೀನುಗಾರಿಕೆಯಿಂದ ಅದೆಷ್ಟೋ ಮೀನಿನ ಸಂತತಿ ನಾಶಗೊಂಡಿದೆ. ಪಾಪ್ಲೆಟ್, ಇಸ್ವಾಣ, ಕುರಡಿ, ಗೋಲಿ, ಶಾಡೆ, ತೊರಕೆ, ಹೋಳಾ, ಬೆಳ್ಳಂಜೆ ಮುಂತಾದ ಜಾತಿಯ ಮೀನುಗಳ ಸಂಖ್ಯೆ ಇತ್ತೀಚಿಗೆ ವಿರಳವಾಗಿವೆ. ಸಾಂಪ್ರದಾಯಿಕ ಮೀನುಗಾರಿಕೆಯಾದ ಏಂಡಿ ಬಲೆ, ರಂಪಣಿ, ಕಂಟ್ಲೆ, ಪಟ್ಟೆಬಲೆ, ಬೀಡುಬಲೆ ಪದ್ಧತಿಗಳು ಕಡಿಮೆಯಾಗಿ ಯಾಂತ್ರೀಕೃತ ಪದ್ಧತಿ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಹಾಗೂ ಜತೆಗೆ ಈ ಲೈಟ್ ಫಿಶಿಂಗ್ನಿಂದಾಗಿ ಸಾಂಪ್ರದಾಯಿಕ ಮೀನುಗಾರರಿಗೆ ಮತ್ತಷ್ಟು ಕಂಟಕ ಉಂಟಾಗಿದೆ’ ಎಂದು ದೂರಿದರು.
‘ಬಂಡವಾಳಶಾಹಿಗಳ ಹಪಾಹಪಿ ತನ, ಹಣ ಗಳಿಕೆಯ ಉದ್ಯಮಿಗಳಿಂದ ಮೀನುಗಾರಿಕೆ ಸರ್ವಪತನ ಹೊಂದುತ್ತಿದೆ. ಮುಂದೊಂದು ದಿನ ಕಾಣಲು ಮೀನು ಸಿಗದೇ, ಜಿಲ್ಲೆಯ ಮೀನುಗಾರಿಕೆ ಹೀಗಿತ್ತು ಎಂದು ಶಾಲೆಗಳಲ್ಲಿ ಪಾಠ ಹೇಳುವ ಪರಿಸ್ಥಿತಿ ಬಂದರೂ ಬರಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ನಕುಲ್, ‘ಕೇಂದ್ರ ಸರ್ಕಾರದ ಆದೇಶವನ್ನು ಜಿಲ್ಲೆಯಲ್ಲಿ ಪಾಲಿಸಲಾಗುತ್ತಿದೆ. ಕಾನೂನು ವಿರುದ್ಧವಾಗಿ ಮೀನುಗಾರಿಕೆ ನಡೆಸುವ ಅನೇಕ ಬೋಟ್ ಮಾಲೀಕರ ಮೇಲೆ ಪ್ರಕರಣಗಳನ್ನು ದಾಖಲಿಸಿ, ದಂಡಗಳನ್ನು ಪಾವತಿಸಿಕೊಳ್ಳಲಾಗಿದೆ. ಇನ್ನೊಮ್ಮೆ ಈ ಬಗ್ಗೆ ಪರಿಶೀಲಿಸಿ, ಕವರಮ ಕೈಗೊಳ್ಳುತ್ತೇವೆ’ ಎಂದರು.
ಮೀನುಗಾರ ಮುಖಂಡರಾದ ಸದಾನಂದ ಹರಿಕಂತ್ರ, ಸುಧಾಕರ ತಾರಿ, ಸೋಮಯ್ಯ ಹರಿಕಂತ್ರ, ಕೃಷ್ಣ ಹರಿಕಕಂತ್ರ, ದೇವರಾಯ್ ಸೈಲ್, ಮಂಕಾಳಿ ಅಂಬಿಗ ಹಾಜರಿದ್ದರು.