ಕಾರವಾರ:‘ಅಂಕೋಲಾದ ಅವರ್ಸಾ, ಹಾರವಾಡ ಹಾಗೂ ಹಟ್ಟಿಕೇರಿ ಭಾಗದ ಜನರಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆಯನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿ ಅವರ್ಸಾ, ಹಾರವಾಡ ಹಾಗೂ ಹಟ್ಟಿಕೇರಿ ಭಾಗದ ಜನರು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ಅವರ್ಸಾದಿಂದ ಹಾರವಾಡ ರೈಲು ನಿಲ್ದಾಣಕ್ಕೆ ಹಾಗೂ ಬಸ್ ನಿಲ್ದಾಣಕ್ಕೆ ತೆರಳಲು ಅನುಕೂಲವಾಗುವಂತೆ ಅಲ್ಲಿಂದ ಕೆಳಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಬೇಕು. ಈ ಬಗ್ಗೆ ಈಗಾಗಲೇ ಮನವಿ ನೀಡಲಾಗಿತ್ತು. ಬೇಡಿಕೆ ಈಡೇರಿಸದಿದ್ದಲ್ಲಿ ರಸ್ತೆ ತಡೆ ಹಿಡಿದು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಲಾಗಿತ್ತು. ಅದರಂತೆ ಐಆರ್‌ಬಿಯವರು ತಾವು ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಹಾಗೂ ಯಾವುದೇ ಅಡೆತಡೆ ಉಂಟು ಮಾಡದಂತೆ ಅಲ್ಲಿನ ಗ್ರಾಮ ಪಂಚಾಯ್ತಿಗೆ ಲಿಖಿತವಾಗಿ ತಿಳಿಸಿದ್ದರು. ಹೀಗಾಗಿ ನಾವು ಯಾವುದೇ ತಡೆವೊಡ್ಡಿರಲಿಲ್ಲ’ ಎಂದು ತಿಳಿಸಿದರು.
‘ಆದರೆ ಕಂಪೆನಿಯವರು ಚತುಷ್ಪಥ ನಿರ್ಮಾಣದ ವೇಳೆ ನಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಯಾವುದೇ ಲಿಖಿತ ಹೇಳಿಕೆ ನೀಡಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಈ ಹಿಂದೆ ಸೂಚಿಸಿದಂತೆ ರಸ್ತೆ ತಡೆ ಹಿಡಿದು ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೂರುತ್ತೇವೆ’ ಎಂದು ಎಚ್ಚರಿಸಿದರು.
ಪ್ರಮುಖರಾದ ಮಾರುತಿ ನಾಯ್ಕ, ವಿನೋದ ನಾಯ್ಕ, ಗಣಪತಿ ನಾಯ್ಕ, ದರ್ಶನ ರಾಮನಾಥ, ನಾದೇಶ ತಾಂಡೇಲ ಹಾಜರಿದ್ದರು.