ಅಂಕೋಲಾ ; ಮಾದನಗೇರಿಯ ಬಳಲೆಯ ಅಪೂರ್ವ ಎಜ್ಯುಕೇಶನ್ ಸೊಸೈಟಿಯ ವಾರ್ಷಿಕ ಸ್ನೇಹ ಸಮ್ಮೇಳನ ಅಪೂರ್ವ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಅಂಕೋಲಾ ತಾಲೂಕಿನ ತಾಲೂಕ ಪಂಚಾಯತದ ಅಧ್ಯಕ್ಷರಾದ ಶ್ರೀಮತಿ ಸುಜಾತ ಗಾಂವಕರ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದ್ದು ಅವರ ಸುಪ್ತ ಪ್ರತಿಭೆಗಳು ಇಲ್ಲಿ ಅನಾವರಣಗೊಳ್ಳುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ವರ್ಷಪೂರ್ತಿ ಶಾಲೆಗಳಲ್ಲಿ ಪಠ್ಯದೊಂದಿಗೆ ಹಲವು ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ಕೊನೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ದಿನ ವಿದ್ಯಾರ್ಥಿಗಳಿಗೆ ವಿಶೇಷ ಹಾಗೂ ಸಂಭ್ರಮದ ದಿನವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಗಳು ಹೊರ ಬರಬೇಕಾದರೆ ಸೂಕ್ತ ವೇದಿಕೆ ಹಾಗೂ ಮಾರ್ಗದರ್ಶನದ ಅಗತ್ಯತೆ ಇದೆ. ಪಾಲಕರು ಮಕ್ಕಳ ಆಸಕ್ತಿಯನ್ನು ಅರಿತು ಅವರಿಗೆ ಆಸಕ್ತಿಯುಳ್ಳ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಬೇಕೇ ವಿನಹ ತಮ್ಮ ಒತ್ತಡವನ್ನು ಮಕ್ಕಳ ಮೇಲೆ ಹೇರಬಾರದು. ಭವಿಷ್ಯದಲ್ಲಿ ಮಕ್ಕಳು ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎನ್ನುವುದನ್ನು ಪಾಲಕರು ನಿರ್ಧರಿಸದೇ ಮಕ್ಕಳ ಭವಿಷ್ಯದ ಆಯ್ಕೆಯನ್ನು ಅವರಿಗೇ ಬಿಡಬೇಕು. ಕಠಿಣ ಪರಿಶ್ರಮ, ಸತತ ಅಭ್ಯಾಸದ ಮೂಲಕ ವಿದ್ಯಾರ್ಥಿಗಳು ಮುನ್ನಡೆದರೆ ಖಂಡಿತವಾಗಿಯೂ ನಿಮಗೆ ಯಶಸ್ಸು ಲಭಿಸುತ್ತದೆ. ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಎಂದರು.

RELATED ARTICLES  ಮಾ.17 ರಂದು ಹೊನ್ನಾವರದ ಹವ್ಯಕದಲ್ಲಿ ಮಲೆನಾಡು ಗಿಡ್ಡ ಹಬ್ಬ : ಸಂಯೋಜನೆಗೊಂಡಿದೆ ವೈವಿದ್ಯಮಯ ಕಾರ್ಯಕ್ರಮ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾದನಗೇರಿಯ ಶ್ರೀ ಮಹಾಲಸ ಸಿದ್ಧಿವಿನಾಯಕ ಟ್ರಸ್ಟ್ ನ ಅಧ್ಯಕ್ಷರಾದ ಸುನೀಲ ಪೈ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಷ್ಟೇ ಪಠ್ಯೇತರ ಚಟುವಟಿಕೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

RELATED ARTICLES  ಶಿರಸಿಯಲ್ಲಿಂದು 11 ಮಂದಿಗೆ ಕೊರೊನಾ..!

ಈ ಸಂದರ್ಭದಲ್ಲಿ ಅರುಣ ನಾಡಕರ್ಣಿ, ಸತೀಶ ಗೌಡ, ಶ್ರಿಮತಿ ಮಾಲಿನಿ ಎಂ. ನಾಯಕ, ದಿನೇಶ ತಲಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.