ಹೊನ್ನಾವರ: ವಕೀಲಿ ವೃತ್ತಿ ಪವಿತ್ರ ಮತ್ತು ಸೇವಾಪರ ವೃತ್ತಿಯಾದ್ದರಿಂದ ವೃತ್ತಿಗೆ ಬಂದ ಕಿರಿಯರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಆದರ್ಶ ವೃತ್ತಿ ಬದುಕು ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ಅಭಿಯೋಜಕ ಪ್ರವೀಣಕುಮಾರ ನಾಯ್ಕ ಕರೆ ನೀಡಿದರು.
ಅವರು ಹೊನ್ನಾವರ ನ್ಯಾಯಾಲಯದಿಂದ ಕುಂದಾಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಪ್ರಯುಕ್ತ ಹೊನ್ನಾವರ ವಕೀಲರ ಸಂಘ ಏರ್ಪಡಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಸೇವೆಯಲ್ಲಿ ಇರುವ ತನ್ನನ್ನು ಹೊನ್ನಾವರ ವಕೀಲರ ಸಂಘವು ಗೌರವದಿಂದ ನಡೆಸಿಕೊಂಡಿದೆ. ಇಲ್ಲಿನ ಹಿರಿಯ ವಕೀಲರ ಆದರ್ಶವನ್ನು ನಾನು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ. ಕಿರಿಯ ವಕೀಲರು ಅಧ್ಯಯನಶೀಲರಾಗಿ ನ್ಯಾಯಾದಾನದಲ್ಲಿ ನ್ಯಾಯಾಲಯಕ್ಕೆ ಸಹಾಯಕರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ಜಜ್ಜ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ, ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾದ ಮಧುಕರ ಭಾಗ್ವತ ಹಾಗೂ ಹೆಚ್ಚುವರಿ ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾದ ಸನ್ಮತಿ ಎಸ್.ಆರ್., ಹಿರಿಯ ವಕೀಲ ವಿ.ಎಂ. ಭಂಡಾರಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.