ಅಯ್ಯಪ್ಪ ಸ್ವಾಮಿ: ಶಿವ ಮತ್ತು ವಿಷ್ಣು ದೇವರ ನಿಗೂಢ ದೈವಿಕ ಮಗನ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಹೌದು, ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯನೀಯವಾಗಿರುವ ಭಗವಾನ್ ವಿಷ್ಣುವಿನ ಮಗುವಿಗೆ ಶಿವನು ತಂದೆಯಾಗುತ್ತಾನೆ. ಪ್ರತೀ ವರ್ಷ ಭಕ್ತರು ಇವರಿಬ್ಬರ ಮಗನಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಪವಿತ್ರ ಸ್ಥಳವು ಕೇರಳದಲ್ಲಿದೆ ಮತ್ತು 41 ದಿನಗಳ ಉಪವಾಸದ ಬಳಿಕ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಹೌದು, ನೀವು ಸರಿಯಾಗಿ ಊಹಿಸಿದ್ದೀರಿ. ನಾವು ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವರ ಬಗ್ಗೆ ಮಾತನಾಡುತ್ತಿದ್ದೇವೆ. ಅಯ್ಯಪ್ಪ ದೇವರು ಶಿವ ಮತ್ತು ಮೋಹಿನಿ(ವಿಷ್ಣುವಿನ ನಾರಿ ರೂಪ)ಯ ಕೂಡುವಿಕೆಯಿಂದ ಹುಟ್ಟಿದವ. ಬ್ರಹ್ಮ ದೇವರಿಂದ ವರವನ್ನು ಪಡೆದು ಭೂಲೋಕಕ್ಕೆ ಕಂಠಕವಾಗಿದ್ದ ಮಹಿಷಿಯ ವಧೆಗಾಗಿ ಅಯ್ಯಪ್ಪ ಹುಟ್ಟಿದ್ದ. ರಾಜಶೇಖರನೆಂಬ ರಾಜನು ಅಯ್ಯಪ್ಪನನ್ನು ಬೆಳೆಸಿದ.

ಅಯ್ಯಪ್ಪ ದೇವರು ಬ್ರಹ್ಮಚಾರಿ ಮತ್ತು ಆತನು ಯೋಗದ ಭಂಗಿಯಲ್ಲಿ ಕುಳಿತುಕೊಂಡು ಕತ್ತಿನಲ್ಲಿ ಒಂದು ಸರ ಹಾಕಿಕೊಂಡಿದ್ದಾನೆ. ಅಯ್ಯಪ್ಪ ದೇವರು ಜೀವಿಸಿದ ಶಬರಿಮಲೆಯಲ್ಲಿ ಅಯ್ಯಪ್ಪ ದೇವರ ಮಂದಿರವಿದೆ. ಇದು ವಿಶ್ವದ ಅತ್ಯಂತ ದೊಡ್ಡ ಯಾತ್ರೆಯ ಸ್ಥಳವಾಗಿದೆ ಮತ್ತು ಭಕ್ತಿಭಾವದಿಂದ ಅಯ್ಯಪ್ಪ ದೇವರನ್ನು ಪೂಜಿಸಿದರೆ ಭಕ್ತರು ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎಂದು ನಂಬಲಾಗಿದೆ. ಆದರೆ ಇಬ್ಬರು ದೇವರ ಸಂಬಂಧದಿಂದ ಹುಟ್ಟಿದ ನಿಗೂಢ ದೇವರ ಬಗ್ಗೆ ತಿಳಿಯಬೇಕೇ? ಮುಂದೆ ಓದಿ.

ಮಹಿಷಿ: ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುತ್ತಾಳೆ. ಇದರಿಂದ ಸಿಟ್ಟಿಗೆದ್ದ ಆತನ ಸೋದರಿ ಮಹಿಷಿ ತನ್ನ ಸೋದರನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾಳೆ. ದೀರ್ಘಕಾಲ ತಪಸ್ಸು ಮಾಡಿದ ಆಕೆ ಬ್ರಹ್ಮನನ್ನು ಒಲಿಸಿಕೊಳ್ಳುತ್ತಾಳೆ. ಶಿವ ಮತ್ತು ವಿಷ್ಣುವಿನ ಮಗನನ್ನು ಹೊರತುಪಡಿಸಿ ಯಾರಿಂದಲೂ ತನಗೆ ಸಾವು ಬರಬಾರದೆಂಬ ವರವನ್ನು ಪಡೆಯುತ್ತಾಳೆ. ಪುರುಷರಿಬ್ಬರು ಮಗುವನ್ನು ಪಡೆಯಲು ಸಾಧ್ಯವಿಲ್ಲವೆಂದು ಭಾವಿಸಿದ ಮಹಿಷಿ ತಾನು ಅಮರಳೆಂದು ಭಾವಿಸುತ್ತಾಳೆ. ಇದರಿಂದ ಆಕೆ ಭೂಮಿ ಎಲ್ಲರಿಗೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾಳೆ.

RELATED ARTICLES  ಅಂತರ್ ರಾಜ್ಯ ಗಾಂಜಾ ಸಾಗಾಟಗಾರನನ್ನು ಬಂಧಿಸಿದ ಕುಮಟಾ ಪೊಲೀಸರು.

ಶಿವ ಮತ್ತು ವಿಷ್ಣುವಿನ ಮಿಲನ: ಮಹಿಷಿಯು ದೇವಲೋಕಕ್ಕೆ ಬಂದು ಹಾನಿಯುಂಟು ಮಾಡಿದಾಗ ಎಲ್ಲಾ ದೇವದೇವತೆಗಳು ವಿಷ್ಣು ಮತ್ತು ಶಿವನಿಂದ ನೆರವು ಪಡೆಯಲು ತೆರಳುತ್ತಾರೆ. ಈ ವೇಳೆ ವಿಷ್ಣು ಒಂದು ಯೋಜನೆ ರೂಪಿಸುತ್ತಾನೆ. ಸಮುದ್ರ ಮಂಥನದ ವೇಳೆ ರಾಕ್ಷಸರು ಅಮೃತವನ್ನು ಕುಡಿಯುವುದನ್ನು ತಪ್ಪಿಸಲು ವಿಷ್ಣು, ಮೋಹಿನಿ ರೂಪವನ್ನು ಧರಿಸಿದ್ದ. ವಿಷ್ಣು ಮತ್ತೆ ಮೋಹಿನಿಯ ರೂಪ ತಳೆದರೆ ಆಗ ಶಿವನೊಂದಿಗಿನ ಮಿಲನದಿಂದ ದೈವಿಕ ಮಗುವನ್ನು ಪಡೆಯಬಹುದು. ಇದರಿಂದ ದುರ್ಗೆಯ ಶಕ್ತಿಯೊಂದಿಗೆ ಮಹಿಷಿಯನ್ನು ಮಣಿಸಬಹುದು ಎನ್ನುತ್ತಾನೆ.

ರಾಜಕುಮಾರ ಮಣಿಕಂಠ: ಅಯ್ಯಪ್ಪ ದೇವರು ಹುಟ್ಟಿದ ಬಳಿಕ ಆತನ ದೈವಿಕ ತಂದೆ-ತಾಯಿ ಆತನ ಕೊರಳಿಗೆ ಬಂಗಾರದ ಮಣಿಯನ್ನು ಕಟ್ಟುತ್ತಾರೆ ಮತ್ತು ಆತನನ್ನು ಪಂಪಾ ನದಿ ತೀರದಲ್ಲಿ ಬಿಡುತ್ತಾರೆ. ಮಕ್ಕಳಿಲ್ಲದ ರಾಜ ರಾಜಶೇಖರ ಈ ನದಿ ಬದಿಯಲ್ಲಿ ಸಾಗಿಹೋಗುತ್ತಿದ್ದಾಗ ಮಗುವಿನ ಅಳುವನ್ನು ಕಂಡು ಹುಡುಕುತ್ತಾ ಹೋಗಿ ಮಗುವನ್ನು ತೆಗೆದುಕೊಂಡು ಅರಮನೆಗೆ ಹೋಗುತ್ತಾನೆ. ಅಲ್ಲಿ ಮಣಿಕಂಠನನ್ನು ಆತ ತನ್ನ ಮಗನಂತೆ ಸಾಕುತ್ತಾನೆ. ಮಣಿಕಂಠನ ಆಗಮನದ ಕೆಲವು ಸಮಯದ ಬಳಿಕ ರಾಣಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ರಾಜ ಮಾತ್ರ ಮಣಿಕಂಠನೇ ತನ್ನ ಉತ್ತರಾಧಿಕಾರಿಯಾಗಬೇಕೆಂದು ಬಯಸುತ್ತಾನೆ. ರಾಣಿ ಮಾತ್ರ ತನ್ನ ಮಗನೇ ರಾಜನಾಗಬೇಕೆಂದು ಬಯಸುತ್ತಾಳೆ. ಇದರಿಂದ ಆಕೆ ಅನಾರೋಗ್ಯದ ನೆಪವೊಡ್ಡಿ ಮಣಿಕಂಠನನ್ನು ಕೊಲ್ಲಲು ಪ್ರಯತ್ನಿಸುತ್ತಾಳೆ. ರಾಣಿಯ ಆಜ್ಞೆಯಂತೆ ವೈದ್ಯರು ಕೂಡ ಹುಲಿ ಹಾಲಿನಿಂದ ಮಾತ್ರ ರಾಣಿ ಗುಣಮುಖವಾಗಲು ಸಾಧ್ಯ ಎಂದು ಹೇಳುತ್ತಾರೆ. ಇದರಿಂದ ಮಣಿಕಂಠನು ರಾಣಿಗಾಗಿ ಹುಲಿ ಹಾಲನ್ನು ತರಲು ಕಾಡಿಗೆ ತೆರಳುತ್ತಾನೆ.
ಮಹಿಷಿಯನ್ನು ಕೊಂದ ಅಯ್ಯಪ್ಪ: ಹುಲಿಯ ಹಾಲನ್ನು ಪಡೆಯಲು ಹೋದ ಮಣಿಕಂಠನಿಗೆ ಮಹಿಷಿ ಎದುರಾಗುತ್ತಾಳೆ. ಇಬ್ಬರ ಮಧ್ಯೆ ದೀರ್ಘ ಕಾಳಗ ನಡೆಯುತ್ತದೆ ಮತ್ತು ಅಂತಿಮವಾಗಿ ಅಜುತಾ ನದಿ ತೀರದಲ್ಲಿ ಮಹಿಷಿಯನ್ನು ಮಣಿಕಂಠ ಕೊಲ್ಲುತ್ತಾನೆ. ಇದರ ಬಳಿಕ ಆತ ಹುಲಿ ಹಾಲನ್ನು ತರಲು ಹೋಗುತ್ತಾನೆ ಮತ್ತು ಅಲ್ಲಿ ಶಿವನನ್ನು ಭೇಟಿಯಾಗುತ್ತಾನೆ. ಅಲ್ಲಿ ತನ್ನ ಹುಟ್ಟಿನ ರಹಸ್ಯ ತಿಳಿದುಕೊಳ್ಳುತ್ತಾನೆ.

RELATED ARTICLES  ಬೈಕ್ ಸವಾರನಿಂದ ಕೆಎಸ್ಆರ್ಟಿಸಿ ಚಾಲಕ ನಿರ್ವಾಹಕ ಮೇಲೆ ಹಲ್ಲೆ

ಶಬರಿಮಲೆಯಲ್ಲಿ ಅಯ್ಯಪ್ಪ: ಮಣಿಕಂಠ ಮರಳಿ ಬರುವಾಗ ರಾಜನು ಅದಾಗಲೇ ರಾಣಿಯ ಕಪಟವನ್ನು ತಿಳಿದಿರುತ್ತಾನೆ. ಆತನು ಮಣಿಕಂಠನಲ್ಲಿ ಕ್ಷಮೆಯನ್ನು ಕೋರಿ ಅರಮನೆಯಲ್ಲಿ ಉಳಿಯಲು ತಿಳಿಸುತ್ತಾನೆ. ಆದರೆ ರಾಜನನ್ನು ಸಮಾಧಾನ ಮಾಡಿದ ಮಣಿಕಂಠ ಶಬರಿಮಲೆಯಲ್ಲಿ ಒಂದು ಮಂದಿರ ನಿರ್ಮಿಸಿ ಅಲ್ಲಿ ಮಣಿಕಂಠನು ಅಯ್ಯಪ್ಪ ದೇವರ ರೂಪದಲ್ಲಿ ಯಾವಾಗಲೂ ಜನರ ಒಲಿತಿಗಾಗಿ ನೆಲೆಯೂರುತ್ತಾನೆಂದು ಹೇಳುತ್ತಾನೆ. ಇದರಿಂದ ಅಲ್ಲಿ ಮಂದಿರದ ನಿರ್ಮಾಣವಾಗುತ್ತದೆ ಮತ್ತು ಈ ಪ್ರದೇಶಕ್ಕೆ ಹೋಗಲು ಜನರು ಕಠಿಣ ಹಾದಿಯನ್ನು ಸವೆಸಬೇಕಾಗಿದೆ. ಅಯ್ಯಪ್ಪ ದೇವರು ಬ್ರಹ್ಮಚಾರಿಯಾಗಿರುವ ಕಾರಣದಿಂದ 10-50 ವರ್ಷ ವಯಸ್ಸಿನ ಮಹಿಳೆಯರಿಗೆ ಮಂದಿರಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಭಕ್ತರು 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪ ದೇವರ ದರ್ಶನ ಪಡೆಯುತ್ತಾರೆ. ಅಯ್ಯಪ್ಪ ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ.