ಮಾಲೂರು-ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಗೋಪಾಲರ ಕಲರವ, ಚಿಣ್ಣರ ಚಿಲಿಪಿಲಿ. ಗೋಮಾತೆಯ ಮಡಿಲಲ್ಲಿ ಭಾವಪರವಶರಾಗಿ ಸಂಕ್ರಾಂತಿ ಆಚರಿಸಿದ “ಟೀಮ್ ಗೋಪಾಲ್ಸ್”.
ಗೋಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಐಟಿ-ಬಿಟಿ ಯುವಕರ ತಂಡ “ಗೋಪಾಲ್ಸ್” ಇಂದು ಮಾಲೂರು ಗೋಶಾಲೆಯಲ್ಲಿ “ಗೋವಿನೊಂದಿಗೆ ಸಂಕ್ರಾಂತಿ” ಹಬ್ಬ ಆಚರಿಸಿದರು.
ಗೋಶಾಲೆ ಶೆಡ್ ಸ್ವಚ್ಛಗೊಳೊಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ, ನಂತರ ಗಿಡಗಳ ಸುತ್ತಲಿನ ಕಳೆ ಕೀಳುವುದು, ಜೀವಾಮ್ರತ ತಯಾರಿ ಹಾಗೂ ಬಳಕೆ, ಸಾಂಪ್ರದಾಯಿಕವಾಗಿ ಸಿಹಿ ಪೊಂಗಲ್ ತಯಾರಿ, ಗೋಪೂಜೆ, ಗೋತಳಿಗಳ ಪರಿಚಯ, ಮಕ್ಕಳಿಗೆ ಎತ್ತಿನಗಾಡಿ ಸವಾರಿ, ಹೀಗೆ ಹಲವಾರು ಚಟುವಟಿಕೆಗಳು ನಡೆದವು.
ಅಪರಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಮಠದ ಡಾ.ಸೀತಾರಾಮ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿಯವರು ಆಶೀರ್ವಚನ ಅನುಗ್ರಹಿಸಿದರು.
24/7 ಸಂಸ್ಥೆಯ ನಿರ್ದೇಶಕರಾದ ರಾಜಗೋಪಾಲ ಉಡುಪ ಹಾಗೂ ಸೊಸೈಟಿ ಜನರಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಸೀತಾರಾಮ ವೆಂಕಟರಾಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಜಿ.ಜಿ.ಹೆಗಡೆ, ಡಾ.ಶ್ಯಾಮಪ್ರಸಾದ್, ಶ್ರೀಕಾಂತ ಹೆಗಡೆ ಯಲಹಂಕ, ಗೋಶಾಲೆ ಸಮಿತಿಯ ಕ್ರಷ್ಣ ಭಟ್ ಇವರು ಶ್ರೀಮಠವನ್ನು ಪ್ರತಿನಿಧಿಸಿದರು.
ಗೋಶಾಲೆಯ ಸಿಬ್ಬಂದಿಗಳಿಗೆ ಜ್ಯಾಕೆಟ್ ವಿತರಿಸಲಾಯಿತು.ಸುಮಾರು 250 ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.