ಕಾರವಾರ: ‘ಇಲ್ಲಿನ ಶಾಸಕರು ತಮ್ಮ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನ ಅನುಕೂಲಕ್ಕಾಗಿ ಸರ್ಕಾರಿ ಕಾಲೇಜಿನ ಸೀಟು ಹಂಚಿಕೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಬಡ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ನಾಗರಾಜ ನಾಯಕ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಬಡ ಮಕ್ಕಳ ಅನುಕೂಲಕ್ಕಾಗಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 252 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಆದರೆ 2016ರಲ್ಲಿ 179 ಹಾಗೂ 2017ರಲ್ಲಿ 133 ಮಂದಿಗೆ ಮಾತ್ರ ಅಲ್ಲಿ ಅವಕಾಶ ನೀಡಲಾಗಿದೆ. ಈ ವರ್ಷದಲ್ಲಿ ಇನ್ನುಳಿದ 119 ಸೀಟುಗಳ ಭರ್ತಿಗೆ ಕೆಲವರು ಹಸ್ತಕ್ಷೇಪ ಮಾಡಿರುವುದರಿಂದ 2ನೇ ಹಂತದ ಹಂಚಿಕೆ ನಡೆದಿಲ್ಲ. ಅಂತಿಮ ಹಂತದವರೆಗೆ ಸೀಟು ಸಿಗಬಹುದೆಂದು ಕಾದಿದ್ದ ಸುಮಾರು 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾಜಾಳಿಯ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಹಂಚಿಕೆಯಾಗದಂತೆ ಇಲ್ಲಿನ ಶಾಸಕರು ಒತ್ತಡ ತರುವ ಮೂಲಕ ತಾವು ಬಾಚಿಕೊಂಡಿದ್ದಾರೆ’ ಎಂದು ದೂರಿದರು.
‘ಸರ್ಕಾರಿ ಕಾಲೇಜುಗಳಲ್ಲಿ ಪ್ರಯೋಗಾಲಯಗಳು ಇಲ್ಲದಿದ್ದಲ್ಲಿ ಸಮೀಪದ ಖಾಸಗಿ ಕಾಲೇಜುಗಳ ಪ್ರಯೋಗಾಲಯಗಳನ್ನು ಬಳಸಿಕೊಳ್ಳಲು ಅವಕಾಶಮಾಡಿಕೊಡಬೇಕು ಎಂಬುದು ಕಾಯಿದೆಯಲ್ಲಿದೆ. ಆದರೆ ಇಲ್ಲಿನ ಸರ್ಕಾರಿ ಕಾಲೇಜಿನ ಪ್ರತಿ ವಿದ್ಯಾರ್ಥಿಗಳಿಂದ ಸಾವಿರ ರೂ. ಪಡೆದು ಒಂದು ವರ್ಷದವರೆಗೆ ಪ್ರಯೋಗಾಲಯ ಕಲ್ಪಿಸಲಾಗಿದ್ದು, ನಂತರದ ವರ್ಷಗಳಲ್ಲಿ ಅವಕಾಶಗಳನ್ನು ನಿರಾಕರಿಸಲಾಗಿದೆ. ಪ್ರವೇಶಾತಿ ಮುಗಿದ ಬಳಿಕ ಪ್ರಯೋಗಾಲಯ ನೀಡುವ ಬಗ್ಗೆ ಪ್ರಸ್ತಾಪಿಸಿದೆ’ ಎಂದು ಹೇಳಿದರು.
‘ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಆರಂಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ವಿದಾರ್ಥಿಗಳ ವಸತಿ ನಿಲಯಗಳ ಕೊಠಡಿಗಳಲ್ಲಿ ತರಗತಿ ಪ್ರಾರಂಭಿಸಲಾಗಿತ್ತು. ಆದರೆ ‘ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಒತ್ತಡದಲ್ಲಿ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೂಡಲೇ ನೂತನ ಕಾಲೇಜಿಗೆ ಸ್ಥಳಾಂತರ ಮಾಡಬೇಕು’ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಿದ್ದರು. ತಮ್ಮ ಕಾಲೇಜಿಗೆ ತೊಡಕಾಗಬಹುದು ಎಂಬ ಕಾರಣಕ್ಕೆ ಸ್ಥಳೀಯ ಶಾಸಕರೇ ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಆಪಾದಿಸಿದರು.
ಪ್ರಮುಖರಾದ ರಾಮು ರಾಯ್ಕರ್, ರೂಪಾಲಿ ನಾಯ್ಕ, ಮನೋಜ್ ಭಟ್, ಗಂಗಾಧರ ಭಟ್, ಗಣಪತಿ ಉಳ್ವೇಕರ್, ಭಾಸ್ಕರ್ ನಾರ್ವೇಕರ್, ಜಗದೀಶ ನಾಯಕ ಹಾಜರಿದ್ದರು.