ಭಟ್ಕಳ: ‘ಜನರು ಇನ್ನು ಮುಂದೆಯಾದರೂ ಸರ್ಕಾರಿ ಅಥವಾ ಅರಣ್ಯ ಭೂಮಿ ಒತ್ತುವರಿಗೆ ಯತ್ನಿಸಬಾರದು. ಹಳೇ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡುವ ಮೂಲಕ ನ್ಯಾಯ ಕಲ್ಪಿಸಲು ಯತ್ನಿಸಲಾಗುತ್ತಿದೆ’ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜನರಿಗೆ ಹಕ್ಕು ಪತ್ರ, ಅನಾರೋಗ್ಯವುಳ್ಳವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ಮತ್ತು ವಸತಿ ರಹಿತರಿಗೆ ವಿವಿಧ ಯೋಜನೆಯಡಿ ಮನೆ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
‘ತಾಲ್ಲೂಕಿನಲ್ಲಿ 20 ಸಾವಿರದಷ್ಟು ಅತಿಕ್ರಮಣದಾರರು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಯಾವುದೇ ಆತಂಕ ಬೇಡ. ಈಗ ಮಂಜೂರಾದ 33 ಹಕ್ಕು ಪತ್ರಗಳಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ರುದ್ರಭೂಮಿಗೆ ಅಗತ್ಯ ಇರುವ ನಿವೇಶನ ಸೇರಿವೆ’ ಎಂದರು.
‘ತಾಲ್ಲೂಕಿನಲ್ಲಿ ಈಗಾಗಲೇ ಏಳು ಸಾವಿರ ಮನೆ ಮಂಜೂರು ಮಾಡಲಾಗಿದೆ. ಗುಡಿಸಲು ಮುಕ್ತ ಗ್ರಾಮ ನಿರ್ಮಾಣಕ್ಕೆ ದೃಢ ಹೆಜ್ಜೆ ಇಡಲಾಗಿದೆ. ಯಾವುದೇ ವಿಶೇಷ ಯೋಜನೆ ಇಲ್ಲದೇ ಇದ್ದರೂ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಹೊಗೆ ಮುಕ್ತ ಗ್ರಾಮ ನಿರ್ಮಿಸುವ ನಿಟ್ಟಿನಲ್ಲಿ ಎಲ್ಲ ಬಡ ವರ್ಗದವರಿಗೆ ಉಚಿತವಾಗಿ ಗ್ಯಾಸ್ ಒಲೆ ಹಾಗೂ ಸಿಲಿಂಡರ್ ಅನ್ನು ವಿತರಿಸಲಾಗುವುದು’ ಎಂದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ ಉಪಸ್ಥಿತರಿದ್ದರು.