ಭಟ್ಕಳ : ದೇಶಕ್ಕೆ ರೈತನೇ ಬೆನ್ನೆಲುಬು ಎಂಬ ಮಾತಿದ್ದು ಈ ಮಾತು ಇಲ್ಲಿನ ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ನೀರಕಂಠ ಸಾಲೇಮನೆ ವ್ಯಾಪ್ತಿಯ ಕಾಲುವೆಯ ವಿಚಾರದಲ್ಲಿ ಅಕ್ಷರಶಃ ತದ್ವಿರುದ್ದವಾಗಿದೆ. ಎಕರೆಗಟ್ಟಲೇ ಜಮೀನಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾದ ಸರಕಾರಿ ಕಾಲುವೆ ನಿರ್ವಹಣೆ ಇಲ್ಲದೇ ಹಾಗೂ ಚಿಕ್ಕ ನೀರಾವರಿ ಇಲಾಖೆ ಇಂಜಿಯರಗಳ ಉದ್ದೇಶಪೂರ್ವಕ ಬೇಜವಾದ್ದಾರಿತನದಿಂದ ಸಿಡಿದೆದ್ದ ರೈತರು ಕಾಲುವೆಯಲ್ಲಿನ ಹೂಳನ್ನು ಕೈಯಲ್ಲಿ ಗುದ್ದಲ್ಲಿ ಹಿಡಿದು ನೀರು ಸರಾಗವಾಗಿ ಸಾಗುವಂತೆ ಮಾಡಿದ್ದಾರೆ.
ಜಿಲ್ಲೆಯಲ್ಲಿಯೇ ಅತೀ ದೊಡ್ಡ ನೀರಾವರಿ ಕಾಲುವೆ ಇದಾಗಿದ್ದು, ಈ ಭಾಗದ ರೈತರು ಮಾತ್ರ ಕಾಲುವೆಯ ಪ್ರಯೋಜನ ಪಡೆಯದೇ ಇಲಾಖೆಯ ಬೇಜವಾಬ್ದಾರಿ ನಿರ್ವಹಣೆಯಿಂದ ವಂಚಿತರಾಗಿದ್ದಾರೆ. ಇಲ್ಲಿನ ಕಡವಿನಕಟ್ಟೆ ಡ್ಯಾಂನಿಂದ ಬರುವ ನೀರು ಸರಿ ಸುಮಾರು 700 ಎಕರೆ ಜಮೀನಿಗೆ ಸಾಗುವಳಿ ಮಾಡಲು ಈ ಕಾಲುವೆ ಅನೂಕೂಲವಾಗುತ್ತಿತ್ತು. ಆದರೆ ಮೂರ್ನಾಲ್ಕು ವರ್ಷಗಳಿಂದ ಇಲಾಖೆಯಿಂದ ನಿರ್ವಹಣೆ ಮಾಡದೇ ಹಾಗೇ ಇದ್ದರ ಪರಿಣಾಮ ಈ ಕಾಲುವೆಯಲ್ಲಿ 2 ರಿಂದ 4 ಅಡಿಯಷ್ಟು ಹೂಳು ತುಂಬಿಕೊಂಡಿದ್ದು ಇದರಿಂದ ರೈತರಿಗೆ ಹಾಗೂ ಇಲ್ಲಿನ ನಿವಾಸಿಗರಿಗೆ ಸಮಸ್ಯೆಯಾಗಿದೆ. ಕಾರಣ ಈ ಕಾಲುವೆಯಿಂದ ಬರುವ ನೀರಿನಿಂದ ಇಲ್ಲಿ ರೈತರು ತಮ್ಮ ಜಮೀನನ್ನು ಸಾಗುವಳಿ ಮಾಡಿಕೊಳ್ಳುತ್ತಿದ್ದರು. ಹಾಗೂ ಕಾಲುವೆಯಲ್ಲಿ ಸಂಗ್ರಹವಾದ ನೀರಿನಿಂದ ಈ ಬಾಗದಲ್ಲಿನ ಅಂತರ್ಜಾಲ ಮಟ್ಟ ಏರಿಕೆಯಾಗಿ ಜನರಿಗೆ ಕುಡಿಯುವ ನೀರಿಗೆ ಅನೂಕೂಲಕರವಾಗುತ್ತಿತ್ತು. ಆದರೆ ಇಲಾಖೆಯಿಂದ ರಿಪೇರಿ ಭಾಗ್ಯ ಕಾಣದೇ ದುಸ್ಥಿತಿಗೆ ಬಂದು ತಲುಪಿದ್ದು, ಇಲಾಖೆಯ ಇಂಜಿನಿಯರಗಳಿಗೆ ಹಲವು ವರ್ಷದಿಂದ ಲಿಖಿತ ಮೌಖಿಕ ಹಾಗೂ ಶಿರಾಲಿ ಗ್ರಾ.ಪಂ.ನಿಂದ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನಬಾರದ ಹಿನ್ನೆಲೆ ಇಲ್ಲಿನ ರೈತರೆಲ್ಲು ಸೇರಿ ಕಾಲುವೆಯಲ್ಲಿನ ಹೂಳನ್ನು ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ.
ಸತತ 8 ದಿನಗಳ ಕಾಲ ರೈತರು ಪ್ರತಿನಿತ್ಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸುಮಾರು 7-8 ಕಿ.ಮೀ. ಉದ್ದದ ಕಾಲುವೆಯ ಹೂಳು ಎತ್ತುವ ಕಾರ್ಯ ಪ್ರಗತಿಯಲಿದ್ದು, ಕೋಟೆಬಾಗಿಲು, ಚಿತ್ರಾಪುರ, ಕಡದಬೈಲು, ಸಾಲೇಮನೆ, ನೀರಕಂಠ, ಹುಲ್ಲುಕ್ಕಿ, ಮತ್ತಿಗುಂಡಿ ಭಾಗದ ಒಟ್ಟು 700-800 ಜನ ರೈತರು ರೈತ ಮುಖಂಡರು ಕಡವಿನಕಟ್ಟೆ ಡ್ಯಾಂನಿಂದ ಮೂಡಶಿರಾಲಿಯವರೆಗಿನ ಡ್ಯಾಂ ಹೂಳೆತ್ತುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇಲಾಖೆಗೆ ಸೆಡ್ಡು ಹೊಡೆದು ತಮ್ಮ ಜಮೀನಿನ ಉಳಿವಿಗೆ ತಾವೇ ಗುದ್ದಲಿ ಹಿಡಿದು ಹೂಳನ್ನು ತೆಗೆಯುತ್ತಿದ್ದು, ಈ ಕಾರ್ಯಕ್ಕೆ ಇಲ್ಲಿನ ಶಿರಾಲಿ ಗ್ರಾ.ಪಂ. ಅಧ್ಯಕ್ಷ ವೆಂಕಟೇಶ ನಾಯ್ಕ, ಹಾಗೂ ಈ ವಾರ್ಡನ ಸದಸ್ಯರು ಸಾಥ್ ನೀಡಿದ್ದಾರೆ. ಇನ್ನು ಕಳೆದೆರಡು ವರ್ಷದ ಹಿಂದೆ ನಿರ್ಮಾಣವಾದ ಕಾಲುವೆಯೂ ಕಳಪೆ ರೀತಿಯದ್ದಾಗಿದ್ದು ಈಗಾಗಲೇ ಕಾಲುವೆಯ ಕಾಂಕ್ರೀಟ್ ಸಹ ಕಿತ್ತು ಬಂದಿದೆಂಬ ಆರೋಪ ಇಲ್ಲಿನ ರೈತರದ್ದಾಗಿದೆ. ಸರಕಾರದಿಂದ ಕಾಲುವೆಯ ನಿರ್ವಹಣೆಯ ವೆಚ್ಚವನ್ನು ನುಂಗಿ ನೀರು ಕುಡಿದಿರುವ ಇಲಾಖೆ ಅಧಿಕಾರಿಗಳು ಇಂಜಿಯರಗಳು ಸ್ಥಳಕ್ಕೆ ಬಂದು ಕಾಲುವೆಯ ಅಕ್ಕಪಕ್ಕದಲ್ಲಿ ಹುಲ್ಲು ಗಿಡಗಳನನು ಕಡಿದು ಕಾಲುವೆಗೆ ಹಾಕಿ ಅಲ್ಲಿಯೇ ಬೆಂಕಿ ಹಚ್ಚಿ ನೀರು ಬಿಟ್ಟು ತೆರಳುತ್ತಿದ್ದಾರೆನ್ನುವ ಆರೋಪವೂ ಸ್ಥಳಿಯರಿಂದ ಕೇಳಿ ಬಂದಿದೆ.
ಇಲ್ಲಿನ ಚಿಕ್ಕ ನೀರಾವರಿ ಇಲಾಖೆ ಈ ಭಾಗದ ರೈತರಿಗೆ ಬಹಳಷ್ಟು ಮೋಸ ಮಾಡುತ್ತಿದೆ. ಯಾಕೆಂದರೆ ಇಲಾಖೆ ಮಾಡಬೇಕಾದ ಕೆಲಸವನ್ನು ಇಲ್ಲಿನ ರೈತರು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಕಳೆದ 8 ದಿನದಿಂದ ಮಾಡುತ್ತಾ ಬಂದಿದ್ದಾರೆ. ಇದು ಇಲಾಖೆಯೇ ತಲೆತಗ್ಗಿಸುವಂತಹದ್ದಾಗಿದೆ. ಈ ಕುರಿತು ಇಲಾಖೆ ಇಂಜಿನಿಯರ ಗಮನಕ್ಕೆ ತಂದರೆ ಇಂದು ನಾಳೆ ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿ ಸಮಸ್ಯೆ ಉಲ್ಭಣಕ್ಕೆ ಕಾರಣರಾಗಿದ್ದಾರೆ. ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ತಕ್ಷಣಕ್ಕೆ ಅಮಾನತು ಮಾಡಬೇಕೆಂದು ಶಿರಾಲಿ ಗ್ರಾ.ಪಂ. ಅಧ್ಯಕ್ಷ ವೆಂಕಟೇಶ ನಾಯ್ಕ
ಆಗ್ರಹಿಸಿದರು.
ಸತತ ಐದು ವರ್ಷದಿಂದ ಇಲಖೆಗೆ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿಕೊಂಡು ಬರುತ್ತಿದ್ದು ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲದರ ಕಾರಣ ಎಲ್ಲಾ ರೈತರು ಕಾಲುವೆಯಲ್ಲಿನ ಹೂಳು ಎತ್ತುವ ಕಾರ್ಯಕ್ಕೆ ಮುಂದಾಗಿದ್ದೇವೆ. ಅತೀ ಭ್ರಷ್ಟ ಇಲಾಖೆಯಾಗಿದ ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಕಸುಬನ್ನು ಮೆಟ್ಟುತ್ತಿದ್ದಾರೆ. ಇನ್ನು ಎರಡು ದಿನದ ಗಡುವು ನೀಡಲಿದ್ದು ಅಷ್ಟರೊಳಗಾಗಿ ಸ್ಥಳಕ್ಕೆ ಬಂದು ಮಾಡಬೇಕಾದ ಕಾರ್ಯ ಮಾಡದಿದ್ದರೆ ರಸ್ತೆ ತಡೆ ಮಾಡಲಾಗುವುದು. ಇಲಾಖೆ ಅಧಿಕಾರಿಗಳು ಸಾಗುವಳಿಯಾಗುತ್ತಿದ್ದ ಜಮೀನು ನಾಶವಾಗುವಂತಹ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದು ಅವರ ಜವಾಬ್ದಾರಿ ಅರಿತು ಸ್ಥಳಕ್ಕೆ ಬರಬೇಕೆಂದು ಸ್ಥಳಿಯ ರೈತ ಮುಖಂಡ ಸಂಜಯ ಚಿತ್ರಾಪುರ ಆಗ್ರಹಿಸಿದರು.