ಆಧುನಿಕ ಕಾಲದ ಧಾರ್ಮಿಕ ವಲಯದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿದ್ದು ಅಯ್ಯಪ್ಪ ಪಂಥ. ಪ್ರತಿ ವರ್ಷ ನವೆಂಬರ್ ಎರಡನೇ ವಾರದಿಂದ ಎರಡು ತಿಂಗಳ ಕಾಲ ದೇಶದ ಎಲ್ಲೆಡೆಯಲ್ಲೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಅಯ್ಯಪ್ಪ ನವಾಕ್ಷರಿ ಮಂತ್ರ ಮುಗಿಲು ಮುಟ್ಟುತ್ತದೆ.
ಯಾರು ಈ ಅಯ್ಯಪ್ಪ?
ಕಲಿಯುಗ ವರದನ್, ಧರ್ಮಶಾಸ್ತ, ಭೂತನಾಥನ್, ತಾರಕಬ್ರಹ್ಮ, ಮಣಿಕಂಠ ಮೊದಲಾದ ಹೆಸರುಗಳಿಂದ ಈತ ಪ್ರಸಿದ್ಧಿ. ಅಯ್ಯಪ್ಪ ಎನ್ನುವ ಉಲ್ಲೇಖ ಪುರಾಣಗಳ ಪುಟಗಳಲ್ಲಿ ಇಲ್ಲವಾದರೂ ಅಲ್ಲಿ ಬರುವ ಹರಿಹರ ಪುತ್ರನೇ ಅಯ್ಯಪ್ಪ ಎಂಬ ಪ್ರತೀತಿ ಇದೆ.
ಸಂಸ್ಕೃತದ ಗೌರವ ಸೂಚಕ ಆರ್ಯಪುತ್ರ ಎಂಬ ಶಬ್ದವೇ ಆಡುಭಾಷೆಯಲ್ಲಿ ಅಯ್ಯಪ್ಪನಾಗಿರಬೇಕು. ವಿಷ್ಣು ಮಾಯೆಯಿಂದ ಮೋಹಿನಿಯಲ್ಲಿ ಶಿವಾಂಶದಿಂದ ಜನಿಸಿದ ಶಾಸ್ತಾರನ್ನು ಸಾಕ್ಷಾತ್ ತಾರಕ ಬ್ರಹ್ಮನನ್ನಾಗಿ ಕಲ್ಪಿಸಿ ಮಹಿಷಿ ಮರ್ದನ ಮಾಡಿ, ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯೇ ಈತನ ಅವತಾರದ ರಹಸ್ಯ.
ಪರಶುರಾಮ ಕ್ಷೇತ್ರವೆನಿಸಿದ ಕೇರಳದ ಶಬರಿಮಲೆಯಲ್ಲಿ ದುರ್ಗಮ ಅರಣ್ಯದ ನಡುವೆ ಪಾಂಡಲಮ್ ರಾಜ ರಾಜಶೇಖರ ನಿರ್ಮಿಸಿದ ಗುಡಿಯೊಂದರಲ್ಲಿ ಪಂಚಲೋಹದ ಚಿನ್ಮುದ್ರೆಯ ಅಯ್ಯಪ್ಪ ವಿಗ್ರಹ ಕಂಗೊಳಿಸುತ್ತದೆ. ಅಭಯಹಸ್ತ, ಮಂದಹಾಸದ ಮುಖಾರವಿಂದ, ವಿಗ್ರಹದ ಸುತ್ತ, ದಿವ್ಯಜ್ಯೋತಿಯ ಪ್ರಭಾವಳಿ, ದರ್ಶನ ಮಾತ್ರದಿಂದ ದಟ್ಟ ಅರಣ್ಯದ ಕಲ್ಲುಮುಳ್ಳು ದಾರಿಯ ಕಠಿಣ ಶ್ರಮವನ್ನೆಲ್ಲ ಇಂಗಿಸಿ ಕೋಟಿ ಭಕ್ತರ ಹೃದಯಕ್ಕೆ ಸಿಂಚನ ನೀಡುವ ಲೋಹ ಚುಂಬಕ ವ್ಯಕ್ತಿತ್ವ ಈ ಅಯ್ಯಪ್ಪನದು.
ಶಬರಿಮಲೆ ಶ್ರೇಷ್ಠತ್ವ
ಪುಣ್ಯ ಸ್ಥಳಗಳಲ್ಲಿ ಏಳು ಅರ್ಹತೆಗಳಿದ್ದರೆ ಬಹಳ ಜಾಗೃತ ಸ್ಥಳವೆಂದು ವೇದವಾಕ್ಕು ಇದೆ. ಅವುಗಳಲ್ಲಿ ಒಂದಾದರೂ ಇರಲೇಬೇಕು. ಸ್ವಯಂ ಸೃಷ್ಟಿಯ ಅಥವಾ ಭಗವಂತನ ಜ್ಯೋತಿರ್ಲಿಂಗವಾಗಿರಬೇಕು. ಅಥವಾ ಮಹಾಯಾಗ ನಡೆದ ಜಾಗವಾಗಿರಬೇಕು. ಭಕ್ತಿ ಮಾರ್ಗದಲ್ಲಿ ಧರ್ಮಯುದ್ಧ ನಡೆದ ಸ್ಥಳವಾಗಿರಬೇಕು. ಮುನಿಪುಂಗವರ ತಪೋಭೂಮಿಯಾಗಿರಬೇಕು. ಯೋಗಿಗಳು ವಾಸಿಸಿದ ಸ್ಥಳವಾಗಿರಬೇಕು. ದೇವತೆಗಳಿಂದ ಶ್ರೇಷ್ಠತೆ ಪಡೆದ ಭೂಮಿ ನದಿಗಳ ಸಂಗಮ ಸ್ಥಾನವಾಗಿರಬೇಕು.
ಈ ಮೇಲಿನ 7ರಲ್ಲಿ ಒಂದಿದ್ದರೆ ಅದು ತೀರ್ಥ ಕ್ಷೇತ್ರವಾಗುತ್ತೆ. ಇಂತಹ ಸ್ಥಳಕ್ಕೆ ಯಾತ್ರೆ ಮಾಡುವುದು, ದರ್ಶನ ಮಾಡುವುದೂ ಜೀವಾತ್ಮನ ಎಲ್ಲಾ ಪಾಪಗಳನ್ನು ಭಸ್ಮ ಮಾಡುತ್ತದೆ. ಕೋಟಿ ಪುಣ್ಯ ಬರುತ್ತದೆ. ಶನಿಗ್ರಹದ ತೊಂದರೆ ಇದ್ದರೆ ಅದೂ ಸಹ ಬಿಡುಗಡೆಯಾಗುತ್ತದೆ. ಪರಶುರಾಮ ಕ್ಷೇತ್ರವೆನಿಸಿದ ಶಬರಿಮಲೆಯ ವಿಶಿಷ್ಟತೆ ಹೇಳತೀರದು.
ಹರಿತತ್ವ ಎಂಬುದು ಸ್ತ್ರೀತತ್ವ ಅಥವಾ ಪ್ರಕೃತಿ ತತ್ವವಾಗುತ್ತದೆ. ಹಾಗೇ ಹರತತ್ವ ಎನ್ನುವುದು ಪುರುಷ ತತ್ವ ಅಥವಾ ಕಾರಣ ತತ್ವವಾಗುತ್ತದೆ ಎಂಬುದರ ಹಿನ್ನೆಲೆಯಲ್ಲಿ ಅಯ್ಯಪ್ಪನ ಕಲ್ಪನೆಯಲ್ಲಿ ಸಮಷ್ಟಿ ಚಿತ್ರಣ ಇರುವುದನ್ನು ನಾವು ಗಮನಿಸಬಹುದು.