ಮಂಗಲ್‌ದೋಯಿ, ಅಸ್ಸಾಂ : ಇದು ಸಿನೆಮಾ ಕಥೆ ಅಲ್ಲ, ಸತ್ಯ ಕಥೆ ! ಎರಡು ವರ್ಷಗಳ ಹಿಂದೆ ಒಂದೇ ದಿನ ಆಸ್ಪತ್ರೆಯೊಂದರಲ್ಲಿ ಒಂದೇ ವಾರ್ಡಿನಲ್ಲಿ ಎರಡು ಗಂಡು ಮಗು ಜನಿಸಿದ್ದವು. ಆಸ್ಪತ್ರೆಯವರ ನಿರ್ಲಕ್ಷ್ಯದ ಫ‌ಲವಾಗಿ ಈ ಮಕ್ಕಳು ಅವುಗಳ ಹೆತ್ತವರಲ್ಲಿ ಅದಲು ಬದಲಾಗಿದ್ದವು.

ಆಸ್ಪತ್ರೆಯಿಂದ ಮನೆಗೆ ಮರಳಿದ ಕೆಲವೇ ದಿನಗಳಲ್ಲಿ ಆ ಹೆತ್ತವರಿಗೆ ಆಸ್ಪತ್ರೆಯವರು ತಮಗೆ ಕೊಟ್ಟ ಮಗು ತಮ್ಮದಲ್ಲ ಎಂಬ ಗುಮಾನಿ ಬಂತು. ಆದರೂ ನವಜಾತ ಶಿಶುವಿನ ಮುಖ ಲಕ್ಷಣಗಳನ್ನು ಅರಿಯಲಾಗದೆ ಅವರು ಸುಮ್ಮನಿದ್ದರು; ತಮಗೆ ಕೊಡಲಾದ ಮಗು ತಮ್ಮದೇ ಎಂಬ ವಿಶ್ವಾಸದಲ್ಲಿ ಅದನ್ನು ಬೆಳೆಸಿದರು; ಪಾಲಿಸಿ ಪೋಷಿಸಿದರು. ಕಳೆದ ಎರಡು ವರ್ಷಗಳಲ್ಲಿ ಆ ಹೆತ್ತವರಿಗೆ ತಮ್ಮ ಮಗುವಿನೊಂದಿಗೆ ಅಪಾರವಾದ ಅನ್ಯೋನ್ಯತೆ, ಪ್ರೀತಿ, ಮಮತೆ, ವಾತ್ಸಲ್ಯ ಉಂಟಾಯಿತು.

ಅದಲು ಬದಲಾದ ಶಿಶುಗಳ ಹೆತ್ತವರ ಜೋಡಿಗಳಲ್ಲಿ ಒಂದು ಜೋಡಿ ಮುಸ್ಲಿಮ್‌ ಸಮುದಾಯಕ್ಕೆ ಸೇರಿದವರು; ಇನ್ನೊಂದು ಜೋಡಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಹಿಂದುಗಳು.

ಮಗುವಿಗೆ ಎರಡು ವರ್ಷಗಳಾದ ಬಳಿಕ ಮುಸ್ಲಿಂ ದಂಪತಿ ತಮ್ಮ ಮಗು ಬುಡಕಟ್ಟು ಸಮುದಾಯದ ಮಗುವಿನ ಮುಖ ಲಕ್ಷಣ ಹೊಂದಿರುವುದನ್ನು ಗಮನಿಸಿತು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 23-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಮುಸ್ಲಿಂ ಪತಿ, ಶಿಕ್ಷಕರಾದ ಶಹಾಬುದ್ದೀನ್‌ ಅಹ್ಮದ್‌ ಅವರು ತಮಗೆ ಜನಿಸಿದ್ದ ಮಗು ಆಸ್ಪತ್ರೆಯಲ್ಲಿ ಅದಲು ಬದಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಗು ಹುಟ್ಟಿದ ಸರಕಾರಿ ಆಸ್ಪತ್ರೆಗೆ ಮತ್ತು ಆರೋಗ್ಯ ಇಲಾಖೆಗೆ ಆರ್‌ಟಿಐ ಅರ್ಜಿ ಹಾಕಿದರು. ಆರಂಭದಲ್ಲಿ ಅವರಿಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರು. ಅನೇಕ ಎಡರು ತೊಡರುಗಳನ್ನು ಎದುರಿಸಿಯೂ ನಡೆಸಿದ ತೀವ್ರ ಪ್ರಯತ್ನದ ಬಳಿಕ ಅವರಿಗೆ ಅಧಿಕೃತ ಆರ್‌ಟಿಐ ಮಾಹಿತಿ ಸಿಕ್ಕಿತು; ಆ ಮೂಲಕ ತಮಗೆ ಹುಟ್ಟಿದ ಮಗು ಅದಲು ಬದಲಾದ ವಿಷಯ ಖಚಿತವಾಯಿತು.

ತನ್ನ ಪತ್ನಿ ಮಗುವಿಗೆ ಜನ್ಮ ನೀಡಿದ ದಿನವೇ ಆಕೆಯ ವಾರ್ಡಿನಲ್ಲಿದ್ದ ಬುಡಕಟ್ಟು ಸಮುದಾಯದ ಮಹಿಳೆಗೂ ಗಂಡು ಮಗು ಜನಿಸಿದ್ದು ಅದು ಅದಲು ಬದಲಾಗಿತ್ತು ಎಂಬುದನ್ನು ಶಹಾಬುದ್ದೀನ್‌ ಆರ್‌ಟಿಐ ಮೂಲಕ ಅರಿತರು.

ಬುಡಕಟ್ಟು ಸಮುದಾಯಕ್ಕೆ ಸೇರಿದ ಅನಿಲ್‌ ಬೋರೋ ಎಂಬ ದಂಪತಿ ಸಮೀಪದ ಗ್ರಾಮವೊಂದರ ನಿವಾಸಿ ಎಂದು ಗೊತ್ತಾಗಿ ಶಹಾಬುದ್ದೀನ್‌ ಅವರ ಮನೆಗೆ ತೆರಳಿ ವಿಷಯವನ್ನು ತಿಳಿಸಿದರು. ಆಗ ಬೋರೋ ದಂಪತಿ ಎರಡೂ ಗಂಡು ಮಕ್ಕಳ ಡಿಎನ್‌ಎ ಪರೀಕ್ಷೆಗೆ ಒಪ್ಪಿಕೊಂಡರು. ಈ ಪರೀಕ್ಷೆಯಲ್ಲಿ ಮಕ್ಕಳು ಅದಲುಬದಲಾದದ್ದು ಖಚಿತವಾಯಿತು. ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ದಂಪತಿ ಜೋಡಿ ಕೋರ್ಟಿನಲ್ಲಿ ದಾವೆ ಹೂಡಿದರು.

RELATED ARTICLES  ಕುಮಟಾದಲ್ಲಿ ಸುಂದರವಾಗಿ ಮೂಡಿಬರಲಿದೆ “ನುಡಿ ಹಬ್ಬ”! ನಡೆದಿದೆ ಪೂರ್ವ ಸಿದ್ಧತೆ.

ಆದರೆ ಈ ಸತ್ಯಕಥೆಯ ಕ್ಲೈಮಾಕ್ಸ್‌ ಮಾತ್ರ ರೋಚಕವಾಗಿಯೇ ಇದೆ. ಈ ದಂಪತಿ ಜೋಡಿ ಕಳೆದ ಎರಡು ವರ್ಷಗಳಿಂದ ತಾವು ತಮ್ಮದೆಂದು ತಿಳಿದು ಪಾಲಿಸಿದ ಪೋಷಿಸಿದ ಮಗುವನ್ನೇ ತಮ್ಮಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿತು. ತಾವು ತಮ್ಮ ಮಗುವನ್ನು ಬಿಟ್ಟಿರಲಾರದ ಮಮತೆ, ವಾತ್ಸಲ್ಯ, ಅನ್ಯೋನ್ಯತೆ, ಪ್ರೀತಿಯನ್ನು ಬೆಳೆಸಿಕೊಂಡಿರುವುದರಿಂದ ಈ ಹಂತದಲ್ಲಿ ನಾವು ನಮ್ಮ ಬಳಿ ಇರುವ ಮಗುವನ್ನೇ ಮುಂದೆಯೂ ಉಳಿಸಿಕೊಳ್ಳೋಣ ಎಂಬ ತೀರ್ಮಾನಕ್ಕೆ ಈ ಜೋಡಿ ದಂಪತಿ ಬಂತು. ವಿಶೇಷವಾಗಿ ಮುಸ್ಲಿಂ ಮಾತೆ ಸಲೀಮಾ ಅಹ್ಮದ್‌ ಮತ್ತು ಹಿಂದೂ ಮಾತೆ ಸೇವಾಲಿ ಬೋರೋ ಅವರು ಈ ದೃಢ ನಿರ್ಧಾರ ಕೈಗೊಂಡಿರುವರು.

ಇದೇ ಜನವರಿ 24ರಂದು ನಡೆಯಲಿರುವ ಕೋರ್ಟ್‌ ವಿಚಾರಣೆಯ ವೇಳೆ ಎರಡೂ ಮಕ್ಕಳ ಹೆತ್ತವರು ತಾವು ತಮ್ಮಲ್ಲಿರುವ ಮಗುವನ್ನೇ ತಮ್ಮ ಸ್ವಾಧೀನದಲ್ಲಿ ಉಳಿಸಿಕೊಳ್ಳುವ ತಮ್ಮ ನಿರ್ಧಾರದ ಬಗ್ಗೆ ಅಫಿದಾವಿತ್‌ ಸಲ್ಲಿಸಬೇಕಾಗಿದೆ.