ಕುಮಟಾ-ತಾಲೂಕಿನ ಹೊಳೆಗದ್ದೆಯಲ್ಲಿ ಯುವಕ ಮಂಡಳದ ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ದಿವಂಗತ ಎಮ್.ಎಚ್.ನಾಯ್ಕ ಸ್ಮರಣಾರ್ಥ ನಿರ್ಮಿಸಿದ ವೇದಿಕೆಯಲ್ಲಿ ಜೆ.ಡಿ.ಎಸ್ ಮುಖಂಡರಾದ ಶ್ರೀ ಪ್ರದೀಪ ಡಿ ನಾಯಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಈ ದಿನಗಳಲ್ಲಿ ನಮ್ಮ ಕರಾವಳಿ ಭಾಗದಲ್ಲಿ ಗೊಂದಲಕಾರಿ ವಾತಾವರಣ ನಿರ್ಮಾಣವಾಗಿದ್ದು, ಜನರಲ್ಲಿ ವಿಶ್ವಾಸದ ಕೊರತೆ ಕಂಡುಬರುತ್ತಿದ್ದು ಅವುಗಳೆಲ್ಲವೂ ದೂರವಾಗಬೇಕಾದರೆ ಈ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು. ಆ ಮೂಲಕ ಸಾಂಸ್ಕೃತಿಕ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕು. ಇಂತಹ ಕಾರ್ಯಕ್ರಮಗಳು ಜನರ ನಡುವಿನ ಭಿನ್ನಾಭಿಪ್ರಾಯ, ಜಾತಿ, ಧರ್ಮ, ವೈಷಮ್ಯವನ್ನು ಕಡಿಮೆ ಮಾಡುವುದಲ್ಲದೇ ಊರಿನಲ್ಲಿ ಏಕತಾ ಭಾವನೆಯನ್ನು ಬೆಳೆಸಲು ಸಹಕಾರಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರಾದ ರವಿಕುಮಾರ ಶೆಟ್ಟಿಯವರು ದಿವಂಗತ ಎಮ್.ಎಚ್. ನಾಯ್ಕ ಅವರು ಒಬ್ಬ ಮಾನವೀಯ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು, ಜೊತೆಗೆ ಅವರ ಸರಳ ಸಜ್ಜನ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತೆಂದು ಅಭಿಪ್ರಾಯಪಟ್ಟರು. ಅವರ ವ್ಯಕ್ತಿತ್ವ, ಬಡವರ ಪರ ಕಾಳಜಿ, ನಿರಂತರ ಪರಿಷ್ರಮಗಳನ್ನು ನಾವೆಲ್ಲ ರೂಢಿಸಿಕೊಳ್ಳಬೇಕೆಂಧು ಅಭಿಪ್ರಾಯಪಟ್ಟರು.
ಇಂತಹ ಕಾರ್ಯವನ್ನು ಆಯೋಜಿಸಿದ ಹೊಳೆಗದ್ದೆ ಯುವಕ ಮಂಡಳಿಗೆ ಧನ್ಯವಾದ ಅರ್ಪಿಸಿ, ಮಾನವೀಯ ಮೌಲ್ಯಗಳಿಗೆ ವಿಶೇಷ ಒತ್ತುನೀಡಬೇಕೆಂದು ಕರೆ ನೀಡಿದರು. ಕಾಂಗ್ರೇಸ್ ಮುಖಂಡರಾದ ರವಿಕುಮಾರ ಶೆಟ್ಟಿಯವರು ಬಹುಮಾನ ವಿತರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಧಾರೇಶ್ವರ ಗ್ರಾ.ಪಂ. ಅಧ್ಯಕ್ಷ ಎಸ್.ಟಿ. ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ದೇವೇಂದ್ರ ಶೇರ್ವೆಗಾರ, ಸುರೇಶ ಹರಿಕಂತ್ರ, ಸತೀಶ ನಾಯ್ಕ, ಮುಖ್ಯ ಶಿಕ್ಷಕಿ ಸವಿತಾ ನಾಯ್ಕ, ಯುವಕ ಸಂಘದ ಅಧ್ಯಕ್ಷರಾದ ಜಗದೀಶ ಭಂಡಾರಿ ಉಪಸ್ಥಿತರಿದ್ದರು.
ಸಾಧಕರನ್ನು ಶಿಕ್ಷಕ ಸಾಹಿತಿ ಪಿ. ಆರ್. ನಾಯ್ಕ ಸ್ವಾಗತಿಸಿದರು. ಸುರೇಶ ನಾಯ್ಕ ನಿರೂಪಿಸಿದರು ಮತ್ತು ಸುದೇಶ ನಾಯ್ಕ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ದಯಾನಂದ ದೇಶಭಂಡಾರಿ ಅವರು ವಂದಿಸಿದರು.