ಶಿರಸಿ: ಸಮಾಜದ ಕಟ್ಟಕಡೆಯ ವ್ಯಕ್ತಿ ಮಾಡುವ ಕೆಲಸವನ್ನೂ ಗೌರವದಿಂದ ನೋಡುವಂತಹ ನಿರಹಂಕಾರಿ ಆಗಿದ್ದವರು ರಾಮಕೃಷ್ಣ ಹೆಗಡೆಯವರು. ಅವರಂತೆ ಜಾತಿ, ಮತಗಳ ಚೌಕಟ್ಟು ಮೀರಿದವರು ಮಾತ್ರ ನಾಯಕನಾಗಲು ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರ 14ನೇ ಪುಣ್ಯ ಸ್ಮರಣೆ ನಿಮಿತ್ತ ಶಿರಸಿಯ ಗಾಣಿಗ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಅಧಿಕಾರದಲ್ಲಿರುವವರೆಲ್ಲ ಜನನಾಯಕರಾಗಲು ಸಾಧ್ಯವಿಲ್ಲ. ಇಂತಹ ಜನನಾಯಕರ ಕೊರತೆ ಇಂದಿನ ಸಮಾಜವನ್ನು ಕಾಡುತ್ತಿದೆ. ಪಂಚಾಯತ್ ರಾಜ್ಯ ವ್ಯವಸ್ಥೆಗೆ ನಾಮಕಾವಸ್ಥೆ ಇದ್ದ ಸಂದರ್ಭದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿ ಅಧಿಕಾರಿಗಳ ಎದುರು ಜನಸಾಮಾನ್ಯರ ಹಕ್ಕು ಪರಿಚಯಿಸಿದ ಬದ್ಧತೆಯಿರುವ ವ್ಯಕ್ತಿ ಹೆಗಡೆ. ಅನೇಕ ಪೀಳಿಗೆಗಳ ಮೇಲೆ ಧನಾತ್ಮಕ ಪರಿಣಾಮ ಬೀರಬಹುದಾದ ಯೋಜನೆಗಳ ಚಿಂತನೆಯ ಹರಿಕಾರ ಅವರು. ನಾಯಕ ಜನರ ನಾಡಿಮಿಡಿತ ಅರಿಯುವ ಕೆಲಸ ಮಾಡಿದರೆ ಹಾಗೂ ಅವರಿಗೆ ಬೇಕಾದ ಯೋಜನೆಗಳ ಜಾರಿ ಮಾಡುವ ಮನಸ್ಸು ತೋರಿದರೆ ಯಶಸ್ಸಿಯಾಗಲು ಸಾಧ್ಯ ಎಂಬುದಕ್ಕೆ ಹೆಗಡೆ ಸಾಕ್ಷಿಯಾಗಿದ್ದರು ಎಂದರು.

RELATED ARTICLES  ಮಹಾಬಲೇಶ್ವರ ದೇವಾಲಯದ ತ್ರಿಪುರಾಖ್ಯದೀಪೋತ್ಸವ ಸಂಪನ್ನ: ಜನರನ್ನು ಆಕರ್ಷಿಸಿದ ಹೂವಿನ ಅಲಂಕಾರ

ಪ್ರತಿಯೊಂದೂ ಮಾರಾಟದ ಸರಕಾಗಿರುವ ಸಂದರ್ಭದಲ್ಲಿ ಮೌಲ್ಯಕ್ಕೆ ಬೆಲೆ ಕಟ್ಟಲಾಗುತ್ತಿದೆ. ರಾಮಕೃಷ್ನ ಹೆಗಡೆ ತೋರಿದ ಮೌಲ್ಯಾಧಾರಿತ ರಾಜಕಾರಣ ಮರೆಯಾಗಿದೆ. ಮೌಲ್ಯ ಇಂದು ಅಹಹಾಸ್ಯಕ್ಕೊಳಗಾಗುತ್ತಿದೆ. ರಾಜಕಾರಣ ವ್ಯಾಪಾರೀಕರಣ ಆಗಿದೆ. ರಾಜಕಾರಣದಲ್ಲಿ ಇವತ್ತು ಪ್ರಾಮಾಣಿಕನಾಗಲು ದೊಡ್ಡ ಹೋರಾಟ ನಡೆಸಬೇಕಾಗಿದೆ. ಇಂತಹ ಸಂದರ್ಭದಿಂದ ಹೊರಬರಲು ಹೆಗಡೆ ಜೀವನಾದರ್ಶ ಮಾರ್ಗದರ್ಶನ ಆಗಬೇಕು. ವಂಶ ಪಾರಂಪರ್ಯ ರಾಜಕಾರಣದ ವಿರೋಧಿಯಾಗಿದ್ದ ಅವರು ವ್ಯಕ್ತಿಗತ ಕಾಳಜಿಗೆ ಮೇರು ನಿದರ್ಶನವಾಗಿದ್ದರು ಎಂದರು.

ಇಂದಿನ ರಾಜಕಾರಣದಲ್ಲಿ ಗುಣವಂತ ಹಾಗೂ ಪ್ರಾಮಾಣಿಕವಾಗಿದ್ದರೆ ಲೇವಡಿಯ ವಿಷಯವಾಗಿದೆ. ಪ್ರಾಮಾಣಿಕವಾಗಿರಲು ಇಂದು ಹೋರಾಟ ಮಾಡುವ ಅನಿವಾರ್ಯತೆಯಿದೆ ಎಂದರು.

RELATED ARTICLES  ಪ್ರತಿ ರೈತ ಸಂಪನ್ಮೂಲ ವ್ಯಕ್ತಿ ಆಗುವಂತಾಗಲಿ: ಎಂ.ಪಿ.ಹೆಗಡೆ

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಉಮೇಶ ಭಟ್ಟ ಮಾತನಾಡಿ, ಹೆಗಡೆ ಅವರ ಮುತ್ಸದ್ದಿತನ ಹಿರಿದಾಗಿತ್ತು. ಅವರು ವಿರೋಧಿ ಪಕ್ಷದ ನಾಯಕರಾಗಿ ಮಾತನಾಡುವಾಗ ಆಡಳಿತ ಪಕ್ಷದವರೂ ಕೇಳುತ್ತಿದ್ದರು. ಅವರಿಗೆ ಪಕ್ಷಕ್ಕಿಂತ ಮಾನವೀಯ ಮೌಲ್ಯಗಳೆಡೆ ಸೆಳೆತ ಹೆಚ್ಚಾಗಿತ್ತು ಎಂದರು.

ಈ ಮೊದಲು ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೊದಲು ನಗರದ ಯಲ್ಲಾಪುರ ನಾಕಾದಲ್ಲಿರುವ ರಾಮಕೃಷ್ಣ ಹೆಗಡೆ ಪುತ್ಥಳಿಗೆ ಗಣ್ಯರೆಲ್ಲಾ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ದೊರೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಎಂ.ಶೆಟ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಆರ್.ಹೆಗಡೆ ಅಮ್ಮಚ್ಚಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಮಾನಂದ ನಾಯಕ, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಕೀಲ ಬಿ.ಡಿ.ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.