ಕಾರವಾರ: ಇಲ್ಲಿನ ಚಿತ್ತಾಕುಲದಲ್ಲಿ ಅಳವಡಿಸಲಾಗಿದ್ದ ಶಾಸಕ ಸತೀಶ್ ಸೈಲ್ ಅವರ ಭಾವಚಿತ್ರವಿದ್ದ ಕಟೌಟ್‌ವೊಂದಕ್ಕೆ ಕಿಡಿಗೇಡಿಗಳು ಬುಧವಾರ ರಾತ್ರೋರಾತ್ರಿ ಸಗಣಿಯನ್ನು ಮೆತ್ತಿದ್ದು, ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ್ದಾರೆ.
ಚಿತ್ತಾಕುಲ ಗ್ರಾಮ ಪಂಚಾಯ್ತಿ ಸದಸ್ಯರಾದ ಸೂರಜ್ ದೇಸಾಯಿ ಹಾಗೂ ಸ್ವಾತಿ ದೇಸಾಯಿ ಪಂಚಾಯ್ತಿಗೆ ‘ಶಾಸಕ ಸತೀಶ್ ಸೈಲ್ ಅವರು ₨ 35.31 ಕೋಟಿ ಅನುದಾನ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಶಾಸಕ ಸತೀಶ್ ಸೈಲ್ ಅವರ ಭಾವಚಿತ್ರವಿರುವ ಕಟೌಟ್ ಅನ್ನು ಕೆಲ ದಿನಗಳ ಹಿಂದೆ ಅಳವಡಿಸಿದ್ದರು.
ಬುಧವಾರ ಇದೇ ಗ್ರಾಮದಲ್ಲಿ ಮಾರುತಿ ದೇವರ ಜಾತ್ರೆ ಕೂಡ ಇತ್ತು. ‘ಜಾತ್ರೆಗೆ ಬಂದವರಲ್ಲಿ ಕೆಲ ಕಿಡಿಗೇಡಿಗಳು ರಾತ್ರಿ ಈ ರೀತಿ ಮಾಡಿದ್ದಾರೆ’ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಆದರೆ ಇದು ಯಾತಕ್ಕಾಗಿ ಮಾಡಿದ್ದಾರೆ, ಯಾರು ಮಾಡಿದ್ದಾರೆ ತಿಳಿದಿಲ್ಲ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸೂರಜ್ ದೇಸಾಯಿ ತಿಳಿಸಿದರು.
ಕೆಲವು ಹೊತ್ತಿನ ಬಳಿಕ ಗುರುವಾರ ಕಟೌಟ್‌ಗೆ ಮೆತ್ತಿಕೊಂಡಿದ್ದ ಸಗಣಿಯನ್ನು ಸ್ವಚ್ಛಗೊಳಿಸಲಾಗಿದೆ. ‘ಜಾತ್ರೆಗೆ ಶುಭ ಕೋರಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರ ಭಾವಚಿತ್ರವಿದ್ದ ಕಟೌಟ್ ಅನ್ನು ಕೂಡ ಅಳವಡಿಸಲಾಗಿತ್ತು. ಅದಕ್ಕೂ ಕೂಡ ಇದೇ ರೀತಿ ಮಾಡಿದ್ದು, ಅದನ್ನು ಬೆಳ್ಳಂಬೆಳಿಗ್ಗೆ ಅಲ್ಲಿಂದ ತೆಗೆದಿದ್ದಾರೆ’ ಎಂದು ಹೆಸರೇಳಲಿಚ್ಛಿಸದ ಸ್ಥಳೀಯ ನಿವಾಸಿ ತಿಳಿಸಿದರು.