ಹೊನ್ನಾವರ : ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಮನ-ಮನೆಗಳಲ್ಲಿ ಸ್ಥಿರಗೊಳಿಸುವ ಕಾರ್ಯಕ್ರಮ ದಿ. 28ರಂದು ರವಿವಾರ 10ಗಂಟೆಗೆ ಕವಲಕ್ಕಿ ಸುಬ್ರಹ್ಮಣ್ಯ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಚಿಟ್ಟಾಣಿಯವರ ಒಡನಾಡಿ ಜಲವಳ್ಳಿ ªವೆಂಕಟೇಶ ರಾವ್ ಪುಸ್ತಕ, ಡಿವಿಡಿಗಳನ್ನು ಬಿಡುಗಡೆಮಾಡಿ ಪ್ರಥಮ ಕೃತಿಗಳನ್ನು ಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರಿಗೆ ಸಮರ್ಪಿಸುವರು.
ಯಕ್ಷಗಾನದ ಕೀರ್ತಿ ಶಿಖರ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಶೈಲಿಯನ್ನು ಮತ್ತು ಅವರ ಕಲಾಸಾಧನೆಯನ್ನು ಮೆಚ್ಚದವರಿಲ್ಲ. ಚಿಟ್ಟಾಣಿ ಕಾಲಕ್ರಮೇಣ ಸೃತಿಯಿಂದ ಮರೆಯಾಗುವುದನ್ನು ತಪ್ಪಿಸಲು ಅಭಿಮಾನಿಗಳ ಮನೆಗಳಲ್ಲಿ ಅವರ ಕುರಿತು ಕೃತಿಗಳು ಮತ್ತು ಸಿಡಿ, ಡಿವಿಡಗಳು, ಛಾಯಾಚಿತ್ರಗಳು ಉಳಿದು ಮುಂದಿನ ಪೀಳಿಗೆ ಚಿಟ್ಟಾಣಿ ಹೇಗಿದ್ದರು ಎಂಬುದನ್ನು ಪ್ರತ್ಯಕ್ಷ ಅರಿತುಕೊಳ್ಳಲು ಅನುಕೂಲವಾಗಲು ಈ ಕಾರ್ಯಕ್ರಮ ನಡೆಯಲಿದೆ. ಮೂರು ದಶಕಗಳ ಕಾಲ ಚಿಟ್ಟಾಣಿಯವರನ್ನು ಮೈಸೂರಿಗೆ ಕರೆಸಿಕೊಂಡು ಆಟ ಆಡಿಸುತ್ತಿದ್ದ ಅಭಿಮಾನಿ, ಸಾಹಿತಿ ಮೈಸೂರು ಜಿ.ಎಸ್. ಭಟ್ ಚಿಟ್ಟಾಣಿಯವರ ಕುರಿತು ಬರೆದ ಕೃತಿ ‘ಯಕ್ಷಗಾನ ಕಲಾಧರ’ ಮತ್ತು ಚಿಟ್ಟಾಣಿಯವರ ಜೀವಿತಕಾಲದಲ್ಲಿ ಮತ್ತು ನಂತರ ಬರೆದ ವಿವಿಧ ಲೇಖಕರ ಲೇಖನಗಳನ್ನೊಳಗೊಂಡ ಯಕ್ಷಯುಗ ಪುರುಷ ಕೃತಿಗಳು ಬಿಡುಗಡೆಯಾಗಲಿವೆ.
ಮಂಕಿ ಕೃಷ್ಣ ಮ್ಯೂಸಿಕ್‍ನ ಮಾರುತಿ ನಾಯಕ ಚಿಟ್ಟಾಣಿಯವರ 60ಕ್ಕೂ ಹೆಚ್ಚು ಪ್ರಸಂಗಗಳನ್ನು ಡಿವಿಡಿಗಳಲ್ಲಿ ದಾಖಲಿಸಿದ್ದು ಅವುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಹೆಸರಾಂತ ಛಾಯಾಗ್ರಾಹಕ ಷಣ್ಮುಖ ಚಿಟ್ಟಾಣಿಯವರ ಅಪೂರ್ವ ಚಿತ್ರಗಳನ್ನು ದಾಖಲಿಸಿದ್ದು ಅವು ಪ್ರದರ್ಶನಗೊಳ್ಳಲಿವೆ. ಇವುಗಳನ್ನು ಮನೆಯಲ್ಲಿಟ್ಟುಕೊಂಡರೆ ಚಿಟ್ಟಾಣಿಯವರನ್ನು ಮನೆಯಲ್ಲಿಟ್ಟುಕೊಂಡಂತೆ ಬೇಕಾದಾಗ ನೋಡಬಹುದು, ಓದಬಹುದು. ಜೊತೆಯಲ್ಲಿ ಅಂದು ಚಿಟ್ಟಾಣಿಯವರ ನೆಚ್ಚಿನ ಯಕ್ಷಗಾನದ ಹಾಡುಗಳನ್ನು ಸುಬ್ರಹಣ್ಯ ಧಾರೇಶ್ವರ ಹಾಡಲಿದ್ದು ವ್ಯಾಖ್ಯಾನ ನೀಡಲಿದ್ದಾರೆ.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಸೆಲ್ಕೋಸೋಲಾರ್‍ನ ಮೋಹನ ಹೆಗಡೆ, ಪ್ರಾಚಾರ್ಯ ಎಸ್.ಜಿ. ಭಟ್ ಪ್ರಾಧ್ಯಾಪಕರುಗಳಾದ ನಾಗರಾಜ ಹೆಗಡೆ ಅಪಗಾಲ, ಪ್ರಶಾಂತ ಮೂಡ್ಲಮನೆ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯ ಪರಿಷತ್ತು, ಮಹಾಬಲ ಸಂಶೋಧನಾ ಸಂಸ್ಥಾನ, ಸುಬ್ರಹ್ಮಣ್ಯ ಪ.ಪೂ. ಕಾಲೇಜು ಕಾರ್ಯಕ್ರಮ ಸಂಘಟಿಸುತ್ತಿದೆ. ಚಿಟ್ಟಾಣಿ ಅಭಿಮಾನಿಗಳಿಗೆ ಸಂಘಟಕರು ಸ್ವಾಗತಕೋರಿದ್ದಾರೆ.