ಕಾರವಾರ: ಇಲ್ಲಿನ ಅರಬ್ಬಿ ಸಮುದ್ರ ತೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನ ಪ್ರಯಾಣಿಕರಿಗೆ ಇನ್ನು ಮುಂದೆ ಸುಂದರ ರಸ್ತೆಯ ಜತೆಗೆ ಬಣ್ಣ ಬಣ್ಣದ ಹೂಗಳಿಂದ ತುಂಬಿರುವ ಗಿಡಗಳು ಸ್ವಾಗತ ಕೋರಲಿವೆ.

ನಗರ ಹೊರವಲಯದಲ್ಲಿರುವ ಸದಾಶಿವಗಡ ಪ್ರದೇಶದ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡಲಾಗುತ್ತಿದೆ. ಕಾಳಿ ನದಿ ಸೇತುವೆ ದಾಟಿ ಗೋವಾದತ್ತ ಸಾಗುತ್ತಿದ್ದಂತೆ ಕೆಂಪು ಮಣ್ಣಿನ ನಡುವೆ ಚಿಗುರು ಬಿಟ್ಟಿರುವ ಗಿಡಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಇದೇ ರೀತಿ ಕರ್ನಾಟಕ– ಗೋವಾ ಗಡಿಯವರೆಗೆ ಸುಮಾರು ಏಳು ಕಿ.ಮೀ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯನ್ನು ಐಡಿಯಲ್ ರೋಡ್ ಬಿಲ್ಡರ್ಸ್ (ಐ.ಆರ್‌.ಬಿ) ಸಂಸ್ಥೆ ನಿರ್ವಹಿಸುತ್ತಿದೆ. ಅದರ ಭಾಗವಾಗಿ ಸರ್ವ ಋತು ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದ್ದು, ಇನ್ನೆರಡು ತಿಂಗಳಿನಲ್ಲಿ ಕೆಂಪು, ಬಿಳಿ, ಹಳದಿಯಂತಹ ಗಾಢ ವರ್ಣಗಳ ಪುಷ್ಪಲೋಕ ಅರಳಲಿದೆ.

RELATED ARTICLES  ರಂಗೇರುತ್ತಿದೆ ಉತ್ತರ ಕನ್ನಡ ಜಿಲ್ಲೆಯ ವಿಧಾನಪರಿಷತ್ ಚುನಾವಣೆಯ ಕಣ

ವಾಹನ ಚಾಲನೆಗೂ ಅನುಕೂಲ: ಗೊಂಚಲು ಗೊಂಚಲಾಗಿ ಹೂ ಅರಳಿಸುವ ಗಿಡಗಳನ್ನು ರಸ್ತೆ ವಿಭಜಕಗಳಲ್ಲಿ ನೆಡುವುದರಿಂದ ವಾಹನ ಸವಾರರಿಗೂ ಸಾಕಷ್ಟು ಪ್ರಯೋಜನವಿದೆ ಎನ್ನುತ್ತಾರೆ ಪ್ರವಾಸಿಗ ವೆಂಕಟೇಶ್ ಕುಲಕರ್ಣಿ.

‘ಪುಷ್ಪರಾಶಿಯ ಸಮೀಪದಲ್ಲೇ ವಾಹನ ಚಲಾಯಿಸುವುದರಿಂದ ಮನಸ್ಸಿಗೆ ಸಹಜವಾಗಿಯೇ ಉಲ್ಲಾಸ ಎನಿಸುತ್ತದೆ. ಅಲ್ಲದೇ ರಾತ್ರಿ ವಾಹನ ಚಾಲನೆಗೆ ತುಂಬ ಸಹಕಾರಿಯಾಗಲಿದೆ. ನಮ್ಮ ಎದುರಿನ ರಸ್ತೆಯಿಂದ ಬರುವ ವಾಹನಗಳ ಹೆಡ್‌ಲೈಟ್ ತೀರಾ ಪ್ರಖರವಾಗಿದ್ದಾಗ ಕಣ್ಣಿಗೆ ಬೇಗ ಆಯಾಸವಾಗುತ್ತದೆ. ಅದನ್ನು ವಿಭಜಕದಲ್ಲಿರುವ ಗಿಡಗಳು ತಡೆಯುತ್ತವೆ. ಇದು ಉತ್ತಮ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಗೋಕರ್ಣದಲ್ಲಿ ಮಹಾರುದ್ರ ಪಾರಾಯಣ ವಿಶೇಷ ಪೂಜೆ ಕಾರ್ಯಕ್ರಮ.

‌ದ್ವಿಚಕ್ರ ವಾಹನ ಸವಾರ ಸುನಿಲ್ ಅವರದ್ದು ಇದಕ್ಕೆ ವಿರುದ್ಧವಾದ ಅಭಿಪ್ರಾಯ. ‘ಈ ಗಿಡಗಳಿಂದ ರಸ್ತೆಯ ಅಂದವೇನೋ ಹೆಚ್ಚುತ್ತದೆ. ಆದರೆ, ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಬರುತ್ತಿರುವಾಗ ಮತ್ತೊಂದು ಕಡೆಯಿಂದ ಸಣ್ಣ ಕಾರಿನಲ್ಲಿ ವೇಗವಾಗಿ ಬಂದರೆ ಗೊತ್ತಾಗುವುದೇ ಇಲ್ಲ. ಅದರಲ್ಲೂ ಒಂದು ಬದಿಯ ರಸ್ತೆಯಿಂದ ಮತ್ತೊಂದು ಬದಿಗೆ ಚಲಿಸುವಾಗ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.