ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆಯು ಅಮೃತ ಮಹೋತ್ಸವ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದು, ಅದರ ಭಾಗವಾಗಿ ಮಲ್ಲೇಶ್ವರದಲ್ಲಿರುವ ಮಹಾಸಭೆಯ ಪರಿಸರದಲ್ಲಿ ಹವ್ಯಕ ಪ್ರತಿಭೆಗಳಿಗಾಗಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳ ಸಮ್ಮಿಲನದ “ಪ್ರತಿಬಿಂಬ” ಕಾರ್ಯಕ್ರಮ ಸಂಕ್ರಾಂತಿಯ ಸಂಭ್ರಮದೊಂದಿಗೆ ಸಂಪನ್ನವಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಖ್ಯಾತ ಮನೋವೈದ್ಯರಾದ ಡಾ. ಕೆ ಆರ್ ಶ್ರೀಧರ್ ಅವರು ಮಾತನಾಡಿ, ನಮ್ಮಲ್ಲಿ ಸುಪ್ತವಾಗಿರುವ ಕಲೆಯನ್ನು ಹೊರಗೆ ತರಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತದೆ. ಯಾರು ಗೆದ್ದರು ಯಾರು ಸೋತರು ಎಂಬುದಕ್ಕಿಂತ ನಮ್ಮಲ್ಲಿರುವ ಪ್ರತಿಭೆಯನ್ನು ನಾವೇ ಕಂಡುಕೊಳ್ಳಲು ಇದು ವೇದಿಕೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನೆಯ ಕಾರ್ಯಕ್ರಮಗಳ ಮಿಶ್ರಣದ ಕಾರ್ಯಕ್ರಮವನ್ನು ಆಯೋಜಿಸಿರುವ ಹವ್ಯಕ ಮಹಾಸಭೆಯ ಕಾರ್ಯ ಶ್ಲಾಘನೀಯ. ಸ್ನೇಹಸಮ್ಮಿಲನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹವ್ಯಕರು ಸೇರಿರುವುದು ಹೆಮ್ಮೆ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಖ್ಯಾತ ಪತ್ರಕರ್ತರು ಹಾಗೂ ಹೊಸದಿಗಂತ ಸಮೂಹ ಸಂಪಾದರಕರಾದ ಶ್ರೀ ವಿನಾಯಕ್ ಭಟ್ಟ ಮೂರೂರು ಅವರು ಮಾತನಾಡಿ, ಪ್ರತಿಬಿಂಬ ಕಾರ್ಯಕ್ರಮದಲ್ಲಿ ಹವ್ಯಕರ ಪ್ರತಿಬಿಂಬ ಕಾಣಬಹುದಾಗಿದೆ. ನಮ್ಮ ಬಗ್ಗೆ ನಮಗೆ ಅಭಿಮಾನ ಇರಬೇಕು, ಯಾವುದೇ ಕ್ಷೇತ್ರದಲ್ಲಿಯೇ ಇದ್ದರೂ ನಮ್ಮತನವನ್ನು ಬಿಡದೇ, ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳಬೇಕು. ಹವ್ಯಕರೆಲ್ಲರು ಒಗ್ಗಟ್ಟಾಗಿ ಸಮಾಜದ ಒಳಿತಿಗೆ ಮುನ್ನಡಿ ಇಡೋಣ ಎಂದರು.

RELATED ARTICLES  ತಮ್ಮ ವಾಹನಕ್ಕೆ ತಾವೇ ದಂಡ ವಿಧಿಸಿದ ಪೋಲೀಸರು.

ಅಧ್ಯಕ್ಷತೆವಹಿಸಿದ್ದ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು, ಹವ್ಯಕ ಮಹಾಸಭೆಯಲ್ಲಿ ನಡೆಯುತ್ತಿರುವ ಪ್ರತಿಬಿಂಬ ಕಾರ್ಯಕ್ರಮಕ್ಕೆ 25 ವರ್ಷಗಳ ಇತಿಹಾಸವಿದ್ದು, 25ನೇ ವರ್ಷದ ಪ್ರತಿಬಿಂಬ ಕಾರ್ಯಕ್ರಮ ಇದಾಗಿದೆ. ಹವ್ಯಕ ಸಮಾಜ ಪ್ರತಿಭಾವಂತ ಸಮಾಜ. ಪ್ರತಿಭೆ, ಮೇಧಾಶಕ್ತಿ ಹಾಗೂ ಶಿಸ್ತಿಗೆ ಹವ್ಯಕ ಸಮಾಜ ಹೆಸರುವಾಸಿಯಾಗಿದೆ. ಹಿತ್ತಾಳೆ ಕಿವಿಯ ಜನರು ನಮ್ಮ ಸಮಾಜದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ, ನಮ್ಮ ಸಮಾಜದ ಮೇಲೆ ಎಷ್ಟೇ ಪ್ರಹಾರಗಳಾದರೂ ಮತ್ತೆ ಎದ್ದು ನಿಲ್ಲುವ ಶಕ್ತಿ ನಮಗಿದೆ, ಇಂತಹ ಅದ್ಭುತವಾದ ಸಂಘಟನಾ ಶಕ್ತಿ ಇರುವ ಸಮಾಜ ನಮ್ಮದು ಎನ್ನಲು ಹೆಮ್ಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು, ಚಿಣ್ಣರು – ಮಕ್ಕಳು ಹಾಗೂ ಹಿರಿಯರ ವಿಭಾಗದಲ್ಲಿ ವೈವಿಧ್ಯಮಯ ಸ್ಪರ್ಧೆಗಳು ನಡೆದವು. ಚಿಣ್ಣರ ವಿಭಾಗದಲ್ಲಿ ಸ್ತೋತ್ರಗಾನ,ಛದ್ಮವೇಶ ಸ್ಪರ್ಧೆಗಳು ನಡೆದರೆ, ಮಕ್ಕಳ ವಿಭಾಗದಲ್ಲಿ ಭಗವದ್ಗೀತೆ, ಏಕಪಾತ್ರಾಭಿನಯ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಹಿರಿಯರ ವಿಭಾಗದಲ್ಲಿ ನಡೆದ ರಂಗೋಲಿ ಬಿಡಿಸುವುದು, ಸಂಪ್ರದಾಯದ ಗೀತೆ ಹಾಡುವುದು, ಪಾಯಸ ಕುಡಿಯುವುದು, ಹವಿ ರುಚಿ ಸ್ಪರ್ಧೆಗಳು ಬೆಂಗಳೂರು ಮಹಾನಗರದಲ್ಲೂ ಮನೋರಂಜನೆಯ ಜೊತೆಗೆ, ಹಌಯ ಹಿನ್ನೆಲೆಯ ಹವ್ಯಕ ಸಂಸ್ಕೃತಿಯನ್ನು ಅನಾವರಣಗೊಳಿಸಿದವು.

RELATED ARTICLES  ಕೈಗೆಟುಕುವ ದರದಲ್ಲಿ ಸಾರಿಗೆ ವ್ಯವಸ್ಥೆಗಳನ್ನು ಕಲ್ಪಿಸುವುದು ಕೇಂದ್ರ ಸರ್ಕಾರದ ಆದ್ಯತೆ ; ಪ್ರಧಾನಿ ನರೇಂದ್ರ ಮೋದಿ.

ಹವ್ಯಕ ಕಲಾವಿದರ ನಾದ-ನಿನಾದ, ಯಕ್ಷ ನೃತ್ಯ, ಹಬ್ಬ ಹಾಡುವುದು, ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಭಿಮಾನಿಗಳನ್ನು ರಂಜಿಸಿದರೆ, ಹಾಸ್ಯ ರಂಜನಾ ವೈವಿಧ್ಯದೊಂದಿಗೆ ನಡೆದ ‘ಹವ್ಯಕರ ಬಿಗ್ ಬಾಸ್’ ಕಾರ್ಯಕ್ರಮ ‘ಪ್ರತಿಬಿಂಬ’ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿ ಮೂಡಿಬಂತು.

ಮಹಾಸಭೆಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವೇಣುವಿಘ್ನೇಶ್ ಸಂಪ ಅವರು ಸಭೆಗೆ ಅಭ್ಯಾಗತರನ್ನು ಪರಿಚಯಮಾಡಿ, ಸಭೆಗೆ ಸ್ವಾಗತಿಸಿದರು, ಪ್ರತಿಬಿಂಬದ ಸಂಚಾಲಕರಾದ ಆದಿತ್ಯ ಕಲಗಾರು ಅವರು ಧನ್ಯವಾದ ಸಮರ್ಪಿಸಿದರೆ, ರಾಘವೇಂದ್ರ ಹೆಗಡೆ ಕಡ್ನಮನೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು ಸೇರಿದಂತೆ ನಿರ್ದೇಶಕರು, ಸಂಚಾಲಕರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯ ಹವ್ಯಕ ಬಂಧುಗಳು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಆಸ್ವಾಧಿಸಿ, ಆನಂದಿಸಿದರು.