ಪ್ಯಾರಿಸ್: ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿಯಷ್ಟು ಏರಿಕೆಯಾದರೂ ಜಗತ್ತಿನ ಕಾಲುಭಾಗ ಭೂಮಿ ಒಣಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಸಂಬಂಧ ವಿಜ್ಞಾನಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ತಾಪಮಾನ ಮಾತ್ರ ಇಳಿಕೆಯಾಗುತ್ತಿಲ್ಲ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಖ್ಯಾತ ಹವಾಮಾನ ಪತ್ರಿಕೆಯೊಂದು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಕೇವಲ 2 ಡಿಗ್ರಿ ಜಾಗತಿಕ ತಾಪಮಾನ ಏರಿಕೆಯಾದರೂ ಭೂಮಿಯ ಶೇ.25ರಷ್ಟು ಪ್ರದೇಶ ಒಣಗಿ ಹೋಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಇದರ ಪರಿಣಾಮ ಭೂಮಿಯ ಸಾಕಷ್ಟು ಭಾಗಗಳಲ್ಲಿ ಆಗಲಿದ್ದು, ಈ ಹಿಂದೆಂದಿಗಿಂತಲೂ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾದೇಶಿಕ ತಾಪಮಾನ ಏರಿಕೆ, ಬರಗಾಲ ಮತ್ತು ಕಾಡ್ಗಿಚ್ಚಿನ ಪ್ರಮಾಣ ಅಧಿಕವಾಗಲಿದೆ ಎಂದು ಹೇಳಲಾಗಿದೆ.
ಇಂಗ್ಲೆಂಡ್ ನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ, ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳ ಸಂಶೋಧಕರು 27 ಜಾಗತಿಕ ಹವಾಮಾನ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಜಂಟಿ ವರದಿ ನೀಡಿದ್ದಾರೆ. ವಿಜ್ಞಾನಿಗಳ ಈ ತಂಡದಲ್ಲಿ ಭಾರತದ ವಿಜ್ಞಾನಿ ಮನೋಜ್ ಜೋಷಿ ಇದ್ದಾರೆ. ವರದಿಯಲ್ಲಿರುವಂತೆ ಹವಾಮಾನ ವೈಪರಿತ್ಯದಿಂದ ಆಗುವ ಈ ಬದಲಾವಣೆಯು ಬರಗಾಲ ಹಾಗೂ ಕಾಳ್ಗಿಚ್ಚಿಗೆ ಕಾರಣವಾಗಲಿದೆ. ಆದರೆ ಸರಾಸರಿ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಸೀಮಿತಗೊಳಿಸಿದರೂ ಸಾಕು ಇಂತಹ ವಿಪತ್ತುಗಳಿಂದ ಭೂಮಿಯನ್ನು ರಕ್ಷಿಸಬಹುದು. ಸದ್ಯ ಜಾಗತಿಕ ತಾಪಮಾನವು ಸರಾಸರಿಗಿಂತ 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ಜಗತ್ತಿನಲ್ಲಿ ಕೆಲ ಭಾಗಗಳ ತೇವಾಂಶದಲ್ಲಿ ಬದಲಾವಣೆಯಾಗುತ್ತಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದು, ಭೂಮಿಯ ಮೇಲ್ಮೈ ಒಣಗುವಿಕೆಯನ್ನು ಶುಷ್ಕತೆ ಮೂಲಕ ಅಳೆಯಲಾಗುತ್ತದೆ. ಇದರಲ್ಲಿ ಮಳೆ ಹಾಗೂ ನೀರು ಆವಿಯಾಗುವ ಪ್ರಮಾಣಗಳೂ ಸೇರಿವೆ. ಒಂದು ವೇಳೆ ಭೂಮಿ ಪ್ರಸ್ತುತ ಇರುವ ಒಣಗುವಿಕೆ ಪ್ರಕ್ರಿಯೆ ಇದೇ ರೀತಿ ಮುಂದುವರೆದರೆ ಖಂಡಿತ ಜಾಗತಿಕ ತಾಪಮಾನ ಕನಿಷ್ಠ 2 ಡಿಗ್ರಿಯಷ್ಟು ಏರಿಕೆಯಾಗಲಿದೆ. ಹಾಗೆ ಆಗಿದ್ದೇ ಆದರೆ ಖಂಡಿತಾ ಭೂಮಿಯ ಕಾಲು ಭಾಗ ಭೂ ಪ್ರದೇಶ ನೀರಿಲ್ಲದೇ ಒಣಗಿ ಹೋಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
‘20ನೇ ಶತಮಾನದಲ್ಲಿ ಮೆಡಿಟರೇನಿಯನ್, ಆಫ್ರಿಕಾದ ದಕ್ಷಿಣ ಭಾಗ ಮತ್ತು ಆಸ್ಟ್ರೇಲಿಯಾದ ಪೂರ್ವ ಕರಾವಳಿಯು ತೀವ್ರ ಬರದ ಭೀತಿಯನ್ನು ಎದುರಿಸಿವೆ. ಅರೆ–ಶುಷ್ಕ ವಾತಾವರಣ ಇರುವ ಮೆಕ್ಸಿಕೊ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಕೆಲ ಭಾಗಗಳು ತಾಪಮಾನ ಏರಿಕೆಯಾದ ವೇಳೆ ಸಂಕಷ್ಟ ಎದುರಿಸಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.