ಕಾರವಾರ: ಲೈಟ್ ಫಿಶಿಂಗ್ ಹಾಗೂ ಬುಲ್‍ಟ್ರಾಲ್ ನಿಷೇಧಿಸುವಂತೆ ಒತ್ತಾಯಿಸಿ ಕಾರವಾರ- ಅಂಕೋಲಾ ಟ್ರಾಲರ್ಸ್ ಬೋಟ್ ಯೂನಿಯನ್ ವತಿಯಿಂದ ಪ್ರಭಾರ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿರುವಂತೆ ಮೀನುಗಾರಿಕೆಯಲ್ಲಿಯೂ ಹೊಸ ಹೊಸ ವಿಧಾನಗಳು ಬರಲಾರಂಭಿಸಿದೆ. ಅದರಲ್ಲಿ ಲೈಟ್ ಫಿಶಿಂಗ್ ಕೂಡ ಒಂದು. ಇದರಿಂದಾಗಿ ಮೀನುಗಾರರ ಮೇಲೆ ಹಾಗೂ ಪರಿಸರದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವಿಧಾನದಲ್ಲಿ ಮೀನಿನ ಮರಿಗಳನ್ನು ಕೂಡ ಹಿಡಿಯುವುದರಿಂದ ಮೀನುಗಳ ಉತ್ಪತ್ತಿ ಕಡಿಮೆಯಾಗುತ್ತಿದೆ. ಅಪರೂಪದ ಮೀನುಗಳ ಸಂತತಿ ನಾಶವಾಗುತ್ತಿದೆ. ಇದರಿಂದಾಗಿ ಏಂಡಿ ಮೀನುಗಾರರ ಬಲೆಗಳಿಗೆ ಸಣ್ಣ ಮೀನುಗಳು ಬೀಳದೆ ನಷ್ಟ ಅನುಭವಿಸುತ್ತಿದ್ದಾರೆ. ಸಾಂಪ್ರದಾಯಿಕ ಮೀನುಗಾರರಿಗೂ ಕೂಡ ಮೀನುಗಳು ಸಿಗುತ್ತಿಲ್ಲ. ಹೀಗಾಗಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

RELATED ARTICLES  ಟಿ.ಎಸ್.ಎಸ್ ನಲ್ಲಿ ಅಡಿಕೆಯ ನೇರ ಖರೀದಿ ಪ್ರಾರಂಭ

ಬುಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಮಾಡುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಬದುಕಲು ಸಾಧ್ಯವಾಗುತ್ತಿಲ್ಲ. ಬ್ಯಾಂಕುಗಳಲ್ಲಿ ಮಾಡಿದ ಸಾಲಗಳನ್ನು ತೀರಿಸಲಾಗದೆ ರೈತರಂತೆ ಮೀನುಗಾರರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿರುವ ರಾಜ್ಯ ಸರ್ಕಾರ 12 ನಾಟಿಕಲ್ ಮೈಲು ಒಳಗಡೆ ಲೈಟ್ ಫಿಶಿಂಗ್ ಅನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅದರ ಮೇಲೆ ನಿಷೇಧ ಹೇರಿದೆ. ಆದರೆ ಅದನ್ನು ವಿರೋಧಿಸಿ, ಅಕ್ರಮವಾಗಿ ಎಲ್ಲವೂ ಮುಂದುವರಿದಿದೆ ಎಂದು ಆರೋಪಿಸಿದರು.
ಕಾರವಾರ- ಅಂಕೋಲಾ ಟ್ರಾಲರ್ಸ್ ಬೋಟ್ ಯೂನಿಯನ್ ನ ಬೈತಖೋಲ್ ಅಧ್ಯಕ್ಷ ದಿಲೀಪ್ ಚೆಂಡೇಕರ್, ಬೈತಖೋಲ್ ಹರಿಕಂತ್ರ ಮೀನುಗಾರರ ಸೇವಾ ಸಂಘದ ಅಧ್ಯಕ್ಷ ಶ್ರೀಕಾಂತ್ ಹರಿಕಂತ್ರ, ಕಾರವಾರ- ಅಂಕೋಲಾ ಟ್ರಾಲರ್ ಬೋಟ್ ಮೀನುಗಾರರ ಸಹಕಾರಿ ಸಂಘದ ಬೈತಖೋಲ್ ಉಪಾಧ್ಯಕ್ಷ ನಾಗರಾಜ್ ಹರಿಕಂತ್ರ, ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ಏಷಿಯಾ ಹರಿಕಂತ್ರ, ಟ್ರಾಲರ್ಸ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ ಹಾಜರಿದ್ದರು.

RELATED ARTICLES  ವಯಸ್ಸಿಗೆ ಮೀರಿದ ವಿಶೇಷ ಸಾಮರ್ಥ್ಯದ ಅನಿಕೇತ್ ಭಟ್.