ಕಾರವಾರ: ಕಳೆದ ಆರು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಅಂತೂ ಹೂಳೆತ್ತುವ ಕಾರ್ಯ ಆರಂಭಗೊಂಡಿದೆ. ಚೆನ್ನೈ ಮೂಲದ ಇಂಟರ್‌ನ್ಯಾಷನಲ್ ಸೀ ಪೋರ್ಟ್ ಕಂಪನಿಯ ಹೂಳೆತ್ತುವ ಯಂತ್ರಗಳು ಬಂದರಿನಲ್ಲಿ ತುಂಬಿಕೊಂಡಿರುವ ಸುಮಾರು 17 ಲಕ್ಷ ಕ್ಯೂಬಿಕ್ ಮೀ. ಹೂಳನ್ನು ಖಾಲಿ ಮಾಡುವ ಕಾರ್ಯವನ್ನು ಇತ್ತೀಚಿಗೆ ಪ್ರಾರಂಭಿಸಿವೆ.

ಕಳೆದ ಆರು ವರ್ಷಗಳಿಂದ ಹೂಳು ತೆಗೆಯದಿರುವುದರಿಂದ ಬೃಹತ್ ಹಡಗುಗಳು ಬಂದರಿನಲ್ಲಿ ಲಂಗರು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಇದು ಬಂದರಿನ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದೀಗ ಮತ್ತೆ ಎಂದಿನಂತೆ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈಗಿರುವ ಬಂದರಿನ ಆಳ 5.5 ಮೀ.ನಿಂದ 8.5 ಮೀ.ವರೆಗೆ ಹೂಳೆತ್ತಲಾಗುತ್ತಿದೆ. ಕಳೆದ ಫೆಬ್ರುವರಿಯಲ್ಲಿ ಸೀ ಪೋರ್ಟ್‌ ಕಂಪನಿ ₹ 32 ಕೋಟಿಗೆ ಇದರ ಟೆಂಡರ್ ಪಡೆದಿದ್ದು, ಸುಮಾರು ಒಂದು ವರ್ಷ ತಡವಾಗಿ ಕಾರ್ಯವನ್ನು ಆರಂಭಿಸಿದೆ. ‘ಮಾರ್ಚ್‌ ಒಳಗಾಗಿ ಹೂಳೆತ್ತುವ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಕಂಪೆನಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

RELATED ARTICLES  ಮತ್ತೆ 16 ವಿದ್ಯಾರ್ಥಿಗಳಲ್ಲಿ ಕರೊನಾ ಪಾಸಿಟಿವ್ : ಬೇಕಿದೆ ಸಾಕಷ್ಟು ಮುನ್ನೆಚ್ಚರಿಕೆ

ಒಂದು ಸಣ್ಣ ಪ್ರಮಾಣದ ಹೂಳೆತ್ತುವ ಯಂತ್ರ (Grab digger), ಹೂಳನ್ನು ಅಗೆಯುವ ಯಂತ್ರ (Backhoe) ಸದ್ಯ ಬಂದರು ಪ್ರದೇಶದಲ್ಲಿ ಕಾರ್ಯಾರಂಭ ಮಾಡಿದೆ. ಶೀಘ್ರದಲ್ಲೇ ಮತ್ತೊಂದು ಸಣ್ಣ ಪ್ರಮಾಣದ ಹೂಳೆತ್ತುವ ಯಂತ್ರ ಕೂಡ ಇಲ್ಲಿಗೆ ಬರಲಿದೆ. ಇನ್ನು ಧರಿಯಾ ಮಂಥನ್ ಎಂಬ ಬೃಹತ್ ಗಾತ್ರದ ಅಗೆಯುವ ಯಂತ್ರ (cutter excavator) ಕೂಡ ಇಲ್ಲಿಗೆ ಬರಲಿದ್ದು, ಹಡಗುಗಳು ಸಂಚರಿಸುವ ಮಾರ್ಗದಲ್ಲಿನ ದೊಡ್ಡ ಗಾತ್ರದ ಬಂಡೆಕಲ್ಲುಗಳನ್ನೂ ಕತ್ತರಿಸಿ ಹೂಳೆತ್ತಲಿದೆ. ಕಂಪೆನಿಯ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

RELATED ARTICLES  ಕೊಂಕಣದಲ್ಲಿ ಸಂಪನ್ನಗೊಂಡ ‘ಸರಸ್ವತಿ ಸಂಭ್ರಮ-೨೦೨೩’

10 ಕಿ.ಮೀ. ದೂರಕ್ಕೆ ಹೂಳು: ‘ಬಂದರು ಪ್ರದೇಶದಲ್ಲಿ ಹೂಳೆತ್ತಿದ ತ್ಯಾಜ್ಯಗಳನ್ನು ಸುಮಾರು 10 ಕಿ.ಮೀ. ದೂರದ ಅರಬ್ಬಿ ಸಮುದ್ರದ ಆಳದಲ್ಲಿ ಸುರಿಯಲಾಗುತ್ತದೆ. ಎರಡನೇ ಹಂತದ ಯೋಜನೆಯಡಿ ಬಂದರು ವಿಸ್ತರಣೆಯಾದಾಗ 14 ಮೀ.ನಷ್ಟು ಆಳದವರೆಗೆ ಹೂಳು ತೆಗೆಯಲು ಅವಕಾಶ ಇರಲಿದೆ’ ಎನ್ನುತ್ತಾರೆ ಬಂದರು ಇಲಾಖೆಯ ಎಂಜಿನಿಯರ್ ಟಿ.ಎಸ್.ರಾಠೋಡ್.

‘ಹೂಳೆತ್ತುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆದರೂ ಕೂಡ ಜಲಚರಗಳ ಮೇಲೆ ಅಥವಾ ಇನ್ನಿತರ ಪರಿಣಾಮ ಬೀರಬಹುದಾ? ಎನ್ನುವುದನ್ನು ಪರೀಕ್ಷಿಸಲು ಹೂಳೆತ್ತುವ ಮುನ್ನ ಹಾಗೂ ನಂತರದ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಅದನ್ನು ಪರೀಕ್ಷಿಸುತ್ತೇವೆ. ಆದರೆ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ಅವರು ವಿವರಿಸಿದರು.