ಭಟ್ಕಳ ತಾಲೂಕಿನಾದ್ಯಂತ ಪ್ರತಿವರ್ಷದ ಮಕರ ಸಂಕ್ರಾತಿ ಹಬ್ಬದ ಸಂಧರ್ಭದಲ್ಲಿ ಹಲವು ದೇವಾಲಯಗಳ ಜಾತ್ರೆಗಳು ಆರಂಭವಾಗಲಿದ್ದು, ಈ ಪೈಕಿ ಇಲ್ಲಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಜಾತ್ರೆಯು ಪ್ರತಿ ಸಂಕ್ರಾಂತಿಯಂದು ಆರಂಭವಾಗಿ ಎರಡು ದಿನಗಳ ಕಾಲ ನಡೆಯುತ್ತಾ ಬಂದಿದೆ. ಸೋಮವಾರದಿಂದ ಆರಂಭವಾದ ಶೇಡಬರಿ ಜಾತ್ರಾ ಮಹೋತ್ಸವೂ ವಿಶೇಷ ರೀತಿಯ ಹರಕೆ, ಕಾಣಿಕೆ ಹಾಗೂ ಪೂಜೆಗಳಿಂದಲೇ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ.
ಜಾತ್ರೆಗೆ ಬರುವ ಸಹಸ್ರಾರು ಭಕ್ತರು ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ, ಕಾಣಿಕೆ ಹಾಗೂ ಪೂಜೆಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಎರಡೂ ದಿನಗಳ ಕಾಲ ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಮಾಡಿಕೊಡಲಾಯಿತು. ಜಾತ್ರೆಯ ದಿನದಂದು ತಾಲೂಕಿನಿಂದಷ್ಟೇ ಅಲ್ಲದೇ ಹೊರಗಿನಿಂದಲೂ ಭಕ್ತರು ಆಗಮಿಸಿ ಇಲ್ಲಿ ಹರಕೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಶೇಡಿಮರ ಏರುವ ಹರಕೆ ಹೊತ್ತವರು ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದ ಎದುರಿನಲ್ಲಿ ಶೃಂಗರಿಸಿದ್ದ ಶೇಡಿಮರದಲ್ಲಿ ಕುಳಿತು ಮೂರು ಸುತ್ತು ತಿರುಗಿದ ಬಳಿಕ ಶೇಡಿ ಮರದ ಮೇಲೆ ಕುಳಿತು ಅವರು ತಾವು ತಂದಿದ್ದ ಸಿಂಗಾರ ಹೂವು, ಬಾಳೆ ಹಣ್ಣನ್ನು ಕೆಳಗಡೆಯಿರುವ ಭಕ್ತರ ಮೇಲೆ ಎಸೆಯುವುದು ವಾಡಿಕೆ. ಹಾಗೂ ಇದು ದೇವರ ಪ್ರಸಾದವೆಂದು ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ.
ಇಲ್ಲಿನ ಜಾತ್ರಾ ವಿಶೇಷವೆಂದರೆ ಜಾತ್ರೆಯಲ್ಲಿನ ಹರಕೆ ತೀರಿಸುವ ಭಕ್ತರು ಅತ್ಯಂತ ಶೃದ್ಧಾ ಭಕ್ತಿಯಿಂದ ಬರುತ್ತಾರೆ. ಮತ್ತು ಭಕ್ತರು ತಮ್ಮ ಸಂಕಷ್ಟದ ಸಂಧರ್ಭದಲ್ಲಿ ಬೇಡಿಕೊಂಡ ಶೇಡಿಮರ ಏರುವ ಹರಕೆ ಸಲ್ಲಿಸುವುದು ಅತ್ಯಂತ ಪ್ರಾಮುಖ್ಯತೆಯಾಗಿದೆ.
ವರ್ಷವೂ ಸಹಸ್ರಾರು ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗಲಿದ್ದು, ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಊರಿನ, ಪರ ಊರಿನ ಹಾಗೂ ಅಕ್ಕಪಕ್ಕದ ತಾಲುಕಿನಿಂದ ಜನರು ಬಂದು ಜಾತ್ರೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿದರು. ಈ ಮಧ್ಯೆ ಈ ವರ್ಷ ದೇವಸ್ಥಾನಕ್ಕೆ ಬರುವ ರಸ್ತೆಯೂ ಸಂಫೂರ್ಣ ವಾಹನ ದಟ್ಟಣೆಯಿಂದ ಕೂಡಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಜಾತ್ರಾ ಪ್ರಯುಕ್ತ ಬಿಗಿ ಪೋಲೀಸ್ ಬಂದೋಬಸ್ತ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಯಾಗದಂತೆ ಅತ್ಯಂತ ಶಾಂತಿಯುತವಾಗಿ ದೇವರ ಜಾತ್ರೆಯು ನಡೆಯುವಂತೆ ನೋಡಿಕೊಂಡರು.