ಕಾರವಾರ: ಅಖಿಲ ಭಾರತ ಆಹ್ವಾನಿತ ಎ ಗ್ರೇಡ್ ತಂಡಗಳ ಪುರುಷರ ಕಬಡ್ಡಿ ಚಾಂಪಿಯನ್ಶಿಪ್ ಸತೀಶ್ ಸೈಲ್ ಕೃಷ್ಣಗಿರಿ ಟ್ರೋಫಿ- 2018 ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಇದೇ 23ರಿಂದ 25ರವರೆಗೆ ನಡೆಯಲಿದೆ ಎಂದು ಕಾರವಾರ- ಅಂಕೋಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ಸದಾನಂದ ನಾಯ್ಕ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಬ್ಬಡ್ಡಿ ಪಂದ್ಯಾವಳಿ ಬಗ್ಗೆ ಮಾಹಿತಿ ನೀಡಿ ಕಾರವಾರ- ಅಂಕೋಲಾ ಸತೀಶ್ ಸೈಲ್ ಅಭಿಮಾನಿ ಬಳಗದ ವತಿಯಿಂದ ಕಾರವಾರ- ಅಂಕೋಲಾ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಬಡ್ಡಿ ಪಟುಗಳು ಕೂಡ ಭಾಗವಹಿಸಲಿದ್ದಾರೆ. ಒಟ್ಟೂ 12 ಆಹ್ವಾನಿತ ತಂಡಗಳು ಇಲ್ಲಿ ಸೆಣೆಸಾಡಲಿದ್ದು, ಅದರಲ್ಲಿ ಎರಡು ತಂಡಗಳು ಸ್ಥಳೀಯ ಆಟಗಾರರನ್ನು ಹೊಂದಿರಲಿವೆ ಎಂದು ತಿಳಿಸಿದರು.
ತಂಡಗಳಾವವು: ಒಎಂಜಿಸಿ ಭೂಪಾಲ್, ಮಹಿಂದ್ರಾ ಎಂಡ್ ಮಹಿಂದ್ರಾ, ಸೆಂಟ್ರಲ್ ರೈಲ್ವೆ, ಸೆಂಟ್ರಲ್ ರೈಲ್ವೆ ವಿಭಾಗ, ವಿಜಯಾ ಬ್ಯಾಂಕ್, ಪುಣೆ ವಾರಿಯರ್ಸ್, ಗೋವಾ ರಾಜ್ಯದ ಕಬಡ್ಡಿ ಅಸೋಸಿಯೇಷನ್ ನ ತಂಡ, ಕಸ್ಟಮ್ಸ್ ಟೀಮ್, ಭಾರತ್ ಪೆಟ್ರೋಲಿಯಂ ಹಾಗೂ ಸ್ಥಳೀಯ ಆಟಗಾರರನ್ನು ಒಳಗೊಂಡ ಕಾಮತ್ ಪ್ಲಸ್, ಬೋರ್ಕರ್ ವಾರಿಯರ್ಸ್ ಅವರ ತಂಡ ಮತ್ತು ಜಿಲ್ಲಾ ಕಬಡ್ಡಿ ಅಸೋಸಿಯೇಷನ್‍ನ ಒಂದು ತಂಡ ಭಾಗವಹಿಸಲಿವೆ.
ಬಹುಮಾನಗಳ ಮೊತ್ತ: ಟೂರ್ನಿಯಲ್ಲಿ ಪ್ರಥಮ ವಿಜೇತ ತಂಡಕ್ಕೆ ರೂ. 3.5 ಲಕ್ಷ, ದ್ವಿತೀಯ ರೂ. 2 ಲಕ್ಷ, ತೃತೀಯ ಹಾಗೂ ನಾಲ್ಕನೆಯ ಬಹುಮಾನ ರೂ. 1 ಲಕ್ಷ ಇರಲಿದೆ. ಸುಮಾರು ಇಪ್ಪತ್ತು ಸಾವಿರ ಜನರು ಟೂರ್ನಿ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದ್ದು, 15 ಸಾವಿರ ಮಂದಿಗೆ ಕುಳಿತುಕೊಳ್ಳಲು ಆಸನ, 500 ವಿಐಪಿ ಆಸನ, ಎಲ್‍ಇಡಿ ಪರದೆಗಳು, ನೀರು, ಫುಡ್ ಸ್ಟಾಲ್ ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ. ಸಂಜೆ 7 ರಿಂದ ರಾತ್ರಿ 11ರವರೆಗೆ ಟೂರ್ನಿ ನಡೆಯಲಿದ್ದು, ಟೂರ್ನಿಯ ಉದ್ಘಾಟನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ವಿನಯ ಕುಲಕರ್ಣಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉಪಸ್ಥಿತರಿರಲಿದ್ದಾರೆ ಎಂದರು.
ಇದು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಕಬಡ್ಡಿ ಟೂರ್ನಿ ಆಯೋಜನೆಗೊಳ್ಳುತ್ತಿದ್ದು, ಭಾರತೀಯ ಕಬಡ್ಡಿ ಅಸೋಸಿಯೇಷನ್ ಹಾಗೂ ರಾಜ್ಯ ಕಬಡ್ಡಿ ಅಸೋಸಿಯೇಷನ್ ನ ಅನುಮತಿಯೊಂದಿಗೆ ನಡೆಸಲಾಗುತ್ತಿದೆ. ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನೇಕ ಹಿರಿಯ ಆಟಗಾರರನ್ನು ಸನ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಶಾಸಕ ಸತೀಶ್ ಸೈಲ್, ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ, ಐಎಲ್ ನಾಯ್ಕ, ಜಗದೀಶ್ ನಾಯ್ಕ, ಸಮಾಜ ಸೇವಕ ನಾಯ್ಕ, ಕೆಆರ್ ನಾಯ್ಕ ಹಾಗೂ ಇನ್ನಿತರು ಇದ್ದರು.