ಸಾನ್ ಫ್ರಾನ್ಸಿಸ್ಕೊ: ತನ್ನ ನ್ಯೂಸ್ ಫೀಡ್ ಗುಣಲಕ್ಷಣಗಳಿಗೆ ಹಲವು ಬದಲಾವಣೆಗಳನ್ನು ಫೇಸ್ ಬುಕ್ ಮಾಡಿದ್ದು, ಇದರಿಂದ ಇನ್ನು ಮುಂದೆ ಫೇಸ್ ಬುಕ್ ಬಳಕೆದಾರರು ವಹಿವಾಟು, ಬ್ರಾಂಡ್ ಮತ್ತು ಮಾಧ್ಯಮಗಳ ವಿಷಯಗಳಿಗಿಂತ ತಮ್ಮ ಕುಟುಂಬದವರು ಮತ್ತು ಸ್ನೇಹಿತರಿಂದ ಹೆಚ್ಚಿನ ಅಪ್ ಡೇಟ್ ನೋಡಬಹುದಾಗಿದೆ ಎಂದು ಫೇಸ್ ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್ ಬರ್ಗ್ ತಿಳಿಸಿದ್ದಾರೆ.
2018ರಲ್ಲಿ ಫೇಸ್ ಬುಕ್ ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಪ್ರಮುಖ ಗಮನ ಬಳಕೆದಾರರು ಫೇಸ್ ಬುಕ್ ನಲ್ಲಿ ಕಳೆಯುವ ಸಮಯವನ್ನು ಉತ್ತಮವಾಗಿ ಕಳೆಯಬೇಕೆಂಬುದು. ಜನರನ್ನು ಸಂಪರ್ಕಿಸಿ ಹತ್ತಿರಕ್ಕೆ ತರಲು ನಾವು ಫೇಸ್ ಬುಕ್ ನ್ನು ಆರಂಭಿಸಿದೆವು ಎಂದು ನಿನ್ನೆ ಝುಕರ್ ಬರ್ಗ್ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
ಸಾರ್ವಜನಿಕರಿಗೆ ಉಪಯೋಗವಾಗುವಂತಹ ವಾಣಿಜ್ಯ, ಬ್ರಾಂಡ್ ಗಳು ಮತ್ತು ಮಾಧ್ಯಮಗಳ ಸುದ್ದಿಗಳು, ಪೋಸ್ಟ್ ಗಳು ಫೇಸ್ ಬುಕ್ ಪುಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಖಾಸಗಿ ಕ್ಷಣಗಳನ್ನು ಮತ್ತು ಸಂಗತಿಗಳನ್ನು ಹಂಚಿಕೊಳ್ಳಲು ಕಡಿಮೆ ಅವಕಾಶಗಳಿವೆ ಎಂದು ಫೇಸ್ ಬುಕ್ ಬಳಕೆದಾರರಿಂದ ಪ್ರತಿಕ್ರಿಯೆ ಬರುತ್ತಿತ್ತು ಎಂದಿದ್ದಾರೆ.
ನಾವು ಫೇಸ್ ಬುಕ್ ಆರಂಭಿಸಿ ಹೇಗೆ ಬೆಳೆಸಿದ್ದೇವೆ ಎಂಬುದರ ಕುರಿತು ಪ್ರಮುಖ ಬದಲಾವಣೆಗಳನ್ನು ಮಾಡುತ್ತೇವೆ. ಸಾಮಾಜಿಕ ಸಂವಹನಕ್ಕೆ ಉಪಯೋಗವಾಗುವಂತಹ ಸಂಬಂಧಿತ ವಿಷಯಗಳನ್ನು ತಿಳಿದುಕೊಳ್ಳಲು ನಾವು ಸಹಾಯ ಮಾಡುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಉತ್ಪಾದನ ತಂಡಕ್ಕೆ ವಿಷಯಗಳನ್ನು ನೀಡುವುದು ನಮ್ಮ ಸದ್ಯದ ಗುರಿಯಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಳೆದ ವರ್ಷದಿಂದ ನಮ್ಮ ತಂಡ ಕೆಲಸ ಮಾಡುತ್ತಿದ್ದು, ನ್ಯೂಸ್ ಫೀಡ್ ಮುಂದಿನ ದಿನಗಳಲ್ಲಿ ಕಾಣಬಹುದಾದ ಪ್ರಮುಖ ಬದಲಾವಣೆಯಾಗಿದೆ. ಇಲ್ಲಿ ಬಳಕೆದಾರರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಗುಂಪಿನವರಿಂದ ಹೆಚ್ಚು ಮಾಹಿತಿಗಳನ್ನು ಪಡೆಯಬಹುದು.
ಇಂತಹ ಪೋಸ್ಟ್ ಗಳು ಇಬ್ಬರ ಮಧ್ಯೆ ಸಂವಾದಕ್ಕೆ ದಾರಿ ಮಾಡಿಕೊಡಲಿದೆ. ಉದಾಹರಣೆಗೆ ತಮ್ಮ ಸ್ನೇಹಿತ ಸಲಹೆ ಪಡೆಯಲು ಇಚ್ಛಿಸಿದರೆ ಪ್ರವಾಸ ಹೋಗಲು ಸಲಹೆ ಕೇಳಿದರೆ ಅಥವಾ ಸುದ್ದಿಗಳು, ವಿಡಿಯೋಗಳು ಅನೇಕ ಚರ್ಚೆಗಳಿಗೆ ದಾರಿ ಮಾಡಿಕೊಡಲಿದೆ.
ನ್ಯೂಸ್ ಫೀಡ್ ನ ಸ್ಥಳ ಸೀಮಿತವಾಗಿರುವುದರಿಂದ ಸ್ನೇಹಿತರ ಮತ್ತು ಕುಟುಂಬದವರ ಪೋಸ್ಟ್ ಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ.