ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಪಕ್ಷ ಸ್ಥಾಪನೆ ಕುರಿತು ಘೋಷಣೆಯಾದ ಬೆನ್ನಲ್ಲೇ ದಕ್ಷಿಣ ಭಾರತದ ಮತ್ತೋರ್ವ ಖ್ಯಾತ ನಟ ಕಮಲ್ ಹಾಸನ್ ಹೊಸ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದಿದ್ದು, ಇದೇ ಫೆಬ್ರವರಿ 21ರಂದು ತಮ್ಮ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಫೆಬ್ರವರಿ 21 ರಂದು ಘೋಷಣೆ ಮಾಡಲಿದ್ದು, ಅಲ್ಲದೆ, ತಮ್ಮ ಪಕ್ಷದ ಸಿದ್ಧಾಂತಗಳು, ಗುರಿಗಳೇನು ಎಂಬುದನ್ನೂ ಅವರು ಇದೇ ಸಂದರ್ಭದಲ್ಲಿ ಬಹಿರಂಗ ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಫೆಬ್ರವರಿ 21 ರಿಂದ ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳಲಿರುವ ಕಮಲ್ ಹಾಸನ್ ಅದೇ ದಿನ ಪಕ್ಷದ ಹೆಸರನ್ನು ಘೋಷಿಸಲಿದ್ದಾರೆ.
ಮೂಲಗಳ ಪ್ರಕಾರ ನಟ ಕಮಲ್ ಹಾಸನ್ ಅವರ ಮೂಲ ಊರಾದ ರಾಮನಾಥಪುರಂನಿಂದಲೇ ಅವರ ರಾಜ್ಯ ಪ್ರವಾಸ ಆರಂಭವಾಗಲಿದೆಯಂತೆ. ಬಳಿಕ ಮಧುರೈ, ದಿಂಡಿಗುಲ್ ಮತ್ತು ಶಿವಗಂಗೈ ಗಳಲ್ಲಿ ಕಮಲ್, ಸ್ಥಳೀಯರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ.
ಕಳೆದ 2017 ರ ನವೆಂಬರ್ ನಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಸೂಚನೆ ನೀಡಿದ್ದ ಕಮಲ್ ಹಾಸನ್, ತಮ್ಮ ಉದ್ದೇಶ ಖಂಡಿತ ಪ್ರಚಾರ ಗಳಿಸುವುದಲ್ಲ ಎದು ಸ್ಪಷ್ಟಪಡಿಸಿದ್ದರು. “ನಾನು ಯಾವುದೇ ಪ್ರಚಾರಕ್ಕಾಗಲಿ ರಾಜಕೀಯಕ್ಕೆ ಬರುತ್ತಿಲ್ಲ. ಅಥವಾ ನಾನೊಬ್ಬ ಬಂಡಾಯ ನಾಯಕ ಎಂದೂ ಭಾವಿಸಬೇಕಿಲ್ಲ. ನನಗೆ ನನ್ನ ಜನರನ್ನು ಅರ್ಥಮಾಡಿಕೊಳ್ಳುವುದಕ್ಕೆ ರಾಜಕೀಯವೊಂದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ನಾನು ಭಾವಿಸಿದ್ದೇನೆ. ಕಲಿಯುವುದಕ್ಕೆ ಮತ್ತು ಜನ ಸೇವೆ ಮಾಡುವುದಕ್ಕೆ ಇದೊಂದು ಉತ್ತಮ ಅವಕಾಶ”. ಎಂದು ಅವರು ಹೇಳಿದ್ದರು. ಅಂತೆಯೇ ಅಕಸ್ಮಾತ್ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸಿದರೆ ನಾನು ಅವರ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಸಹ ಕಳೆದ ಸೆಪ್ಟೆಂಬರ್ ನಲ್ಲಿ ಕಮಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.