ಶಿರಸಿ: ತಾವು ಭಾಗಿಯಾದ ಕಾರ್ಯಕ್ರಮದ ಸ್ಥಳವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿರುವ ಕ್ರಮಕ್ಕೆ ಪ್ರಕಾಶ್ ರೈ ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಸಾವಾಲು ಹಾಕಿದ್ದಾರೆ.
ನಾನು ಎಲ್ಲಿಗೆ ಹೋದರು ಆ ಸ್ಥಳವನ್ನು ನೀವು ಪವಿತ್ರ ಗೋಮೂತ್ರದಿಂದ ಸ್ವಚ್ಛಗೊಳಿಸುತ್ತೀರಾ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಶನಿವಾರ ಪಟ್ಟಣದ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ‘ಪ್ರೀತಿ ಪದಗಳ ಪಯಣ ಹೆಸರಿನಲ್ಲಿ ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮವನ್ನು ರೈ ಉದ್ಘಾಟಿಸಿದ್ದರು. ಈ ವೇಳೆ ನಟ ಪ್ರಕಾಶ್ ರೈ ಸಂಸದ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಂಕ್ರಾಂತಿಯಂದು ಮಠದ ಆವರಣ ಹಾಗೂ ಕಾರ್ಯಕ್ರಮ ನಡೆದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ್ದರು.
ಶುದ್ಧೀಕರಣ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಯೊವ ಮೋರ್ಚಾ ನಗರಾಧ್ಯಕ್ಷ ವಿಶಾಲ್ ಮರಾಠೆ ಸೋಗಲಾಡಿ, ಸ್ವಯಂ ಘೋಷಿತ ಬುದ್ದಿಜೀವಿಗಳು ಹಾಗೂ ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶುದ್ಧೀಕರಣ ಮಾಡಲಾಗಿದೆ. ಹಿಂದು ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿ ಆರಾಧಿಸುತ್ತಾರೆ. ಗೋಮಾಂಸ ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಆಗಮನದಿಂದ ನಗರವೇ ಅಪವಿತ್ರವಾದಂತಾಗಿದೆ. ಇದರಿಂದ ಬಿ.ಜೆ.ಪಿ ನಗರ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಶುದ್ದೀಕರಣ ನಡೆಸಲಾಗಿದೆ ಎಂದಿದ್ದರು.