ಕುಮಟಾ : ಶ್ರೀ ಹುಲಿದೇವ ಕ್ರೀಡಾ ಬಳಗ ಹಟ್ಟಿಕೇರಿ, ಮುರೂರು ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಜಿಲ್ಲಾ ಮಟ್ಟದ ಹಾಲಕ್ಕಿ ಸಮಾಜದವರಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು ಹಟ್ಟಿಕೇರಿಯ ಸ.ಹಿ.ಪ್ರಾ.ಶಾಲೆಯ ಕ್ರೀಡಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಯುವ ಮುಖಂಡರಾದ ರವಿಕುಮಾರ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಿಕ್ಷಣದಷ್ಟೇ ಕ್ರೀಡೆಗಳೂ ಕೂಡಾ ಅತಿ ಮಹತ್ವವಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹಾಗೂ ಸ್ವಸ್ಥÀ ಮನಸ್ಸು ಹೊಂದಲು ಸಾಧ್ಯ. ಇಂತಹ ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಚಟುವಟಿಕೆಗಳು ಹೆಚ್ಚೆಚ್ಚು ಜರುಗಬೇಕು ಎಂದು ಶುಭ ಹಾರೈಸಿದರು.
ಅಂಕಣ ಉದ್ಘಾಟಕರಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಅತಿ ಹಿಂದುಳಿದ ಇಂತಹ ಗ್ರಾಮೀಣ ಭಾಗದಲ್ಲಿ ಹಾಲಕ್ಕಿ ಸಮಾಜದವರು ಸಂಘಟಿತರಾಗಿ ಕ್ರೀಡಾ ಚಟುವಟಿಕೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಶಿಕ್ಷಣ ಜ್ಞಾನವನ್ನು ವೃದ್ಧಿಸಿದರೆ ಕ್ರೀಡೆಗಳು ಮಾನಸಿಕ, ದೈಹಿಕ ಸದೃಢತೆಯೊಂದಿಗೆ ಮನಸ್ಸು ಉಲ್ಲಾಸದಿಂದಿರಲು ಸಹಕಾರಿ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಮನುಷ್ಯ ಹೆಚ್ಚು ಲವಲವಿಕೆ ಹಾಗೂ ಚಟುವಟಿಕೆಯಿಂದಿರಲು ಸಾಧ್ಯ. ಹಾಲಕ್ಕಿ ಸಮುದಾಯದವರು ಶ್ರಮಜೀವಿಗಳಾಗಿದ್ದು ದೈಹಿಕ ಸದೃಢತೆಯನ್ನು ಹೊಂದಿರುತ್ತಾರೆ. ಈ ಸಮುದಾಯದವರು ನಮ್ಮ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಸಮಾಜದ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದ್ದು ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕøತಿಕವಾಗಿ ತಮ್ಮನ್ನು ಗುರುತಿಸಿಕೊಳ್ಳಬೇಕಾಗಿದೆ. ಈ ಸಮಾಜದ ಉನ್ನತಿಗಾಗಿ ನಮ್ಮ ಟ್ರಸ್ಟ್ ವತಿಯಿಂದ ಆದಷ್ಟು ಸಹಾಯ-ಸಹಕಾರವನ್ನು ನೀಡುವುದಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕರಾದ ದಿನಕರ ಶೆಟ್ಟಿ ಅವರು ಮಾತನಾಡಿ ಹಾಲಕ್ಕಿ ಸಮುದಾಯದವರು ಸಂಘಟಿತರಾಗಿ ತಮ್ಮ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು. ಹೆಚ್ಚೆಚ್ಚು ಸುಶಿಕ್ಷಿತರಾಗಿ ಶೈಕ್ಷಣಿಕವಾಗಿ ಮುನ್ನಡೆಯಬೇಕು. ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಜಿ.ಪಂ.ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಸಂಘಟಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗಜಾನನ ಪೈ, ಸೂರಜ ನಾಯ್ಕ ಸೋನಿ, ಪಾರ್ವತಿ ಜಿ. ಗೌಡ, ದೇವು ಗೌಡ, ವಿಷ್ಣು ಪಟಗಾರ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.