ಭಟ್ಕಳ: ಕಟ್ಟೇವೀರ ಸ್ಪೋಟ್ರ್ಸ್ ಕ್ಲಬ್ ಮುಠ್ಠಳ್ಳಿ, ರಂಜನ್ ಇಂಡೆನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯೂ ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಜ.19ರಿಂದ 21ರವರೆಗೆ ನಡೆಯಲಿದೆ ಎಂದು ಕಟ್ಟೇವೀರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ನಾಯ್ಕ ತಿಳಿಸಿದರು.
ಅವರು ಬುಧವಾರದಂದು ಸಂಜೆ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಳೆದ 10ವರ್ಷದ ಹಿಂದೆ ಇಲ್ಲಿನ ಮುಠ್ಠಳ್ಳಿ ಗ್ರಾಮದ ಉತ್ಸಾಹಿ ಯುವಕರನ್ನೊಳಗೊಂಡ ಕಟ್ಟೇವೀರ ಸ್ಪೋಟ್ಸ ಕ್ಲಬ್ ಉತ್ತಮ ಉದ್ದೇಶದೊಂದಿಗೆ ಆರಂಭಗೊಂಡಿದ್ದು, ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸ್ಪೋಟ್ಸ ಕ್ಲಬ್ ಕ್ರೀಡೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ. ಈಗ ಯಶಸ್ವಿ 10ನೇ ವರ್ಷದ ಸಂಭ್ರಮದ ನಿಮಿತ್ತ ಜನವರಿ 19 ರಿಂದ 21 ರ ವರೆಗೆ ಸತತ ಮೂರು ದಿನಗಳ ಕಾಲ ಹೊನಲು ಬೆಳಕಿನ 2ನೇ ಬಾರಿ ಪುರುಷರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮೀನುಗಾರಿಕಾ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಶಾಸಕ ಮಂಕಾಳ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಗ್ ಬಾಸ್ ಖ್ಯಾತಿಯ ಪ್ರಥಮ, ಪದ್ಮಶ್ರೀ ಪ್ರಶಸಿ ವಿಜೇತೆ ನಾಡೋಜ ಸುಕ್ರಿ ಬೊಮ್ಮ ಗೌಡ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿರಲಿದ್ದಾರೆ.
ಜನವರಿ 20 ಶನಿವಾರದಂದು ಸಭಾ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಎಮ್.ಎನ್.ಮಂಜುನಾಥ, ಶಿವಾನಿ ಶಾಂತಾರಾಮ ರಂಜನ್ ಇಂಡೆನ್ ಮಾಲಕರು, ರಾಜ್ಯ ಅಮೇಚ್ಯುರ್ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ಎಂ. ಜಯರಾಮ, ಐ.ಎಫ್.ಎಸ್. ಅಧಿಕಾರಿ ಎ.ಟಿ.ದಾಮೋದರ, ತಂಝೀಂ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭವನ್ನು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಸುನೀಲ ಕುಮಾರ್, ಶಿವಾನಿ ಶಾಂತಾರಾಮ ರಂಜನ್ ಇಂಡೆನ್ ಮಾಲಕರು, ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರದೀಪ್ ನರ್ವಾಲ್, ಬಿಗ್ ಬಾಸ್ ಖ್ಯಾತಿಯ ರಿಯಾಜ್ ಬಾಷಾ, ಬೆಳಗಾವಿ ಏರಿಯಾ ಇಂಡಿಯನ್ ಆಯಿಲ್ ಮೇನೆಜರ್ ಆನಂದ ಮೂರ್ತಿ, ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ನಾಯ್ಕ, ಪ್ರೋ ಕಬಡ್ಡಿ ಯು ಮುಂಬಾ ಕೋಚ್ ರವಿ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಬಡ್ಡಿ ಆಟಗಾರರು ಹಾಗೂ ವಿಜಯ ಬ್ಯಾಂಕ್, ಕಸ್ಟಮ್, ರೈಲ್ವೆ, ಎಮ್.ಈ.ಜಿ. (ಆರ್ಮಿ), ಸಿ.ಎಲ್.(ಆರ್ಮಿ) ಕ್ಲಾಸಿಕ್ ನ್ಯಾಶನಲ್ ಬೆಂಗಳುರು ತಂಡ ಮತ್ತು ದಕ್ಷಿಣ ಕನ್ನಡ ಆಳ್ವಾಸ್, ವರುಣ ಟ್ರಾವೆಲ್ಸ, ಎಸ್.ಡಿ.ಎಮ್. ಉಜಿರೆ ಹಾಗೂ ಉತ್ತರ ಕನ್ನಡ ಎರಡು ತಂಡ ಸೇರಿದಂತೆ ಬೇರೆ ಜಿಲ್ಲೆಯ 16 ತಂಡಗಳು ಭಾಗವಹಿಸಲಿವೆ.
ಪಂದ್ಯ ಗೆಲ್ಲುವ ಪ್ರಥಮ ತಂಡಕ್ಕೆ ಬಹುಮಾನವಾಗಿ 1ಲಕ್ಷ ರೂ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 50 ಸಾವಿರ ಹಾಗೂ ಟ್ರೋಫಿ, ತೃತೀಯ ಹಾಗೂ ಚತುರ್ಥ ತಂಡಕ್ಕೆ ತಲಾ 25 ಸಾವಿರ ರೂ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು. ಪಂದ್ಯದ ಬೆಸ್ಟ ಡಿಪೆಂಡರ್ ಮತ್ತು ರೈಡರ್‍ಗೆ ಏರ್ ಕೂಲರ್ ಮತ್ತು ಟ್ರೋಫಿ, ಬೆಸ್ಟ ಆಲ್‍ರೌಂಡರ್‍ಗೆ 32 ಇಂಚಿನ ಎಲ್.ಇ.ಡಿ. ಟಿ.ವಿ ಹಾಗೂ ಪ್ರತಿ ಪಂದ್ಯದ ಉತ್ತಮ ಆಟಗಾರನಿಗೆ 500 ರೂ. ನಗದು ಬಹುಮಾನ ನೀಡಲಾಗುವುದು.
ಪಂದ್ಯವನ್ನು ವೀಕ್ಷಿಸಲು 10 ಸಾವಿರ ಪ್ರೇಕ್ಷಕರ ಗ್ಯಾಲರಿಯ ವ್ಯವಸ್ಥೆ ಮಾಡಲಾಗಿದೆ.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಶಿವಾನಿ ಶಾಂತಾರಾಮ ರಂಜನ್ ಇಂಡೆನ್ ಮಾಲಕರು, ಗ್ರಾ.ಪಂ. ಸದಸ್ಯ ಜಟ್ಟಪ್ಪ ನಾಯ್ಕ, ಕಟ್ಟೇವೀರ ಸ್ಪೋಟ್ಸ ಕ್ಲಬ್ ಮಾಜಿ ಅಧ್ಯಕ್ಷ ರಾಮ ನಾಯ್ಕ, ಕಟ್ಟೇವೀರ ಸ್ಪೋಟ್ಸ ಕ್ಲಬ್ ಕಾರ್ಯದರ್ಶಿ ವೆಂಕಟೇಶ ನಾಯ್ಕ, ಸ್ಪೋಟ್ಸ ಕ್ಲಬ್ ಸದಸ್ಯರಾದ ಮಂಜುನಾಥ ನಾಯ್ಕ, ಶೇಷಗಿರಿ ನಾಯ್ಕ ಉಪಸ್ಥಿತರಿದ್ದರು