ಕಾರವಾರ:ನೂತನ ದಾಂಡೇಲಿ ತಾಲ್ಲೂಕಿನ ತಾಲ್ಲೂಕು ಕಚೇರಿಗೆ ಕಂದಾಯ ಇಲಾಖೆಯ ಹುದ್ದೆ ಸೃಷ್ಠಿಗೆ ಸರ್ಕಾರ ಸೂಚನೆ ನೀಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗುತ್ತಿರುವ 40 ಹೊಸ ತಾಲೂಕುಗಳಿಗೆ ಹುದ್ದೆ ಸೃಷ್ಠಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಆ ಮೂಲಕ ಚುನಾವಣಾ ಮುನ್ನ ರಾಜ್ಯ ಸರ್ಕಾರ ಹೊಸ ತಾಲೂಕುಗಳ ಘೋಷಣೆಯನ್ನು ಅನುಷ್ಠಾನಕ್ಕೆ ತರುತ್ತಿದೆ.
2017-18 ರ ಸಾಲಿನಲ್ಲಿ ಘೋಷಿಸಲಾಗಿದ್ದ 40 ಹೊಸ ತಾಲೂಕುಗಳಿಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ಇದೀಗ ಹೊಸ ತಾಲೂಕು ಕಚೇರಿಗಳಿಗೆ ಅನ್ವಯವಾಗುವಂತೆ ಕಂದಾಯ ಇಲಾಖೆಯ ಹುದ್ದೆ ಸೃಷ್ಠಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಪ್ರತಿ ತಾಲೂಕು ಕಚೇರಿಗಳಿಗೆ ಗ್ರೇಡ್ 1 ತಹಶೀಲ್ದಾರ್ ಒಂದು ಹುದ್ದೆ, ಗ್ರೇಡ್ 2 ತಹಶೀಲ್ದಾರ್ ಒಂದು ಹುದ್ದೆ, ಶಿರಸ್ತೇದಾರ ಎರಡು ಹುದ್ದೆ, ಪ್ರಥಮ ದರ್ಜೆ ಸಹಾಯಕ ಮೂರು ಹುದ್ದೆ, ಆಹಾರ ನಿರೀಕ್ಷಕ ಒಂದು ಹುದ್ದೆ, ದ್ವಿತೀಯ ದರ್ಜೆ ಸಹಾಯಕ ನಾಲ್ಕು ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ನೇಮಕ ಮಾಡುವುದು.
ಬೆರಳಚ್ಚುಗಾರರು/ಡಾಟಾ ಎಂಟ್ರಿ ಆಪರೇಟರ್ ಒಂದು ಹುದ್ದೆ, ಗ್ರೂಪ್ ಡಿ ದರ್ಜೆಯ ನಾಲ್ಕು ಮೂರು ಹುದ್ದೆ ಹಾಗೂ ಚಾಲಕ ಒಂದು ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಸೇರಿ ಒಟ್ಟು 17 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಕೋಲಾರ ಜಿಲ್ಲೆಯ ಕೆಜಿಎಫ್, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ದಾವಣಗೆರೆ ಜಿಲ್ಲೆಯ ನ್ಯಾಮತಿ, ಮೈಸೂರು ಜಿಲ್ಲೆಯ ಸರಗೂರು, ಚಾಮರಾಜನಗರ ಜಿಲ್ಲೆಯ ಹನೂರು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ, ಕಡಬ, ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು ಮತ್ತು ಬೈಂದೂರು, ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ, ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ, ಬಾಗಲಕೋಟೆ ಜಿಲ್ಲೆಯ ರಬಕವಿ, ಬನಹಟ್ಟಿ ಮತ್ತು ಇಳಕಲ್, ವಿಜಯಪುರ ಜಿಲ್ಲೆಯ ಬಬಲೇಶ್ವರ, ದೇವರಹಿಪ್ಪರಗಿ, ತಿಕೋಟ ಮತ್ತು ಚಡಚಣ, ಬಳ್ಳಾರಿ ಜಿಲ್ಲೆಯ ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ, ಬೀದರ್ ಜಿಲ್ಲೆಯ ಚುಟಗುಪ್ಪ ಮತ್ತು ಕಮಲಾಪುರ, ಕಲಬುರಗಿ ಜಿಲ್ಲೆಯ ಕಮಲಾಪುರ, ಯಡ್ರಾಮಿ ಮತ್ತು ಗುರುಮಿಟಕಲ್, ಕೊಪ್ಪಳ ಜಿಲ್ಲೆಯ ಕಾಕನೂರು, ಕನಕಗಿರಿ ಮತ್ತು ಕಾರಟಗಿ, ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಸಿರಿವಾರ, ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹೊಸ ತಾಲೂಕು ಕಚೇರಿಗೆ ಸಿಬ್ಬಂದಿ ನೇಮಿಸಲು ಸೂಚನೆ ನೀಡಲಾಗಿದೆ.