ಕಾರವಾರ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಗೋವಾ ಮಾರ್ಗವಾಗಿ ಕಾರವಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಸ್ನೋಟಿಕರ್ ಅಭಿಮಾನಿ ಬಳಗದ ನೂರಾರು ಕಾರ್ಯಕರ್ತರು ಅಸ್ನೋಟಿಕರ್‍ಗೆ ಅದ್ಧೂರಿ ಸ್ವಾಗತ ಕೋರಿದರು.
ಅಸ್ನೋಟಿಕರ್ ಆಗಮನದ ಸಂದರ್ಭದಲ್ಲಿ ಕರ್ನಾಟಕದ ಗಡಿ ಪ್ರದೇಶವಾಗಿರುವ ಮಾಜಾಳಿ ಚೆಕ್ ಪೋಸ್ಟ್ ಬಳಿ ಆನಂದ ಅಭಿಮಾನಿಗಳು ಸೇರಿದ್ದರು. ಆನಂದ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅವರಿಗೆ ಹಾರ ಹಾಕಿ, ಸಿಹಿ ತಿಂಡಿಗಳನ್ನು ತಿನ್ನಿಸಿ ಆನಂದ ಪರ ಘೋಷಣೆಗಳನ್ನು ಹಾಕಿದರು.
ನಂತರ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನನ್ನ ಮೂಲ ದ್ಯೇಯವಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ನೆಲೆಯನ್ನು ಗಟ್ಟಿ ಮಾಡುತ್ತೇನೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ 4 ರಿಂದ 5 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಜಿಲ್ಲೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತೇವೆ. ಅಭಿವೃದ್ಧಿ ಒಂದೇ ಮಂತ್ರ, ಜಿಲ್ಲೆಗೆ ಜಿಲ್ಲೆಯ ಯುವಜನತೆಗೆ ನ್ಯಾಯ ಕಲ್ಪಿಸಬೇಕಾಗಿದೆ ಎಂದರು.
ಕ್ಷೇತ್ರದ ಯುವಕರು ಉದ್ಯೋಗವಿಲ್ಲದೆ ಕಷ್ಟದಲ್ಲಿದ್ದಾರೆ. ಅಲ್ಲದೇ ಗೋವಾ ರಾಜ್ಯವನ್ನೇ ಅವಲಂಬಿಸಿದ್ದೇವೆ. ಗೋವಾದವರೊಂದಿಗೆ ಭಿಕ್ಷೆ ಕೇಳುವ ಪರಿಸ್ಥಿತಿ ನಮ್ಮ ಜಿಲ್ಲೆಯವರದ್ದಾಗಿದೆ. ಆದರೆ ನಮ್ಮ ಜಿಲ್ಲೆ ನೈಸರ್ಗಿವಾಗಿ ಶ್ರೀಮಂತವಾಗಿದೆ. 120ಕಿಮೀ ಕರಾವಳಿ ಇದೆ. ಬಂದರು, ಪ್ರವಾಸೋಧ್ಯಮಕ್ಕೆ ಹೆಚ್ಚಿನ ಒತ್ತು ನೀಡಿ ಸಾಕಷ್ಟು ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ. ಇದರಿಂದಾಗಿ ನಮ್ಮ ಜಿಲ್ಲೆಯ ಯುವಕರು ಸ್ವಾಭಿಮಾನಿಯಾಗಿ ಜೀವನ ಮಾಡಿಕೊಡಲು ದಾರಿಯಾಗಬಹುದು ಎಂದರು.
ಬಿಜೆಪಿ ರಾಜೀನಾಮೆ ಆಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರೇ ತಾನು ಸದಸ್ಯನಾಗಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತಾನು ರಾಜೀನಾಮೆ ಸಲ್ಲಿಸುವ ವಿಷಯ ಬಂದರೆ ಒಪ್ಪಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.