ಮಾಲೂರು: ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿದೊಡ್ಡ ಗೋಹತ್ಯೆ ನಿಷೇಧ ಆಂದೋಲನ ಅಭಯಾಕ್ಷರ ಅಭಿಯಾನದ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಅಭಯ ಗೋಯಾತ್ರೆಯ ಸಮಾರೋಪ ಸಮಾರಂಭ ಅಭಯ ಮಂಗಲ ಈ ತಿಂಗಳ 21ರಂದು ಮಾಲೂರು ಸಮೀಪದ ಗಂಗಾಪುರದಲ್ಲಿರುವ ಶ್ರೀ ರಾಘವೇಂದ್ರ ಗೋ ಆಶ್ರಮ ಆವರಣದಲ್ಲಿ ನಡೆಯಲಿದೆ.

ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‍ಸ್ವಾಮಿ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಸ್ವಾಮಿಶ್ರೀವಿವೇಕಾನಂದ ಯೋಗ ಅನುಸಂಧಾನ ಕೇಂದ್ರದ ಕುಲಪತಿ ಎಚ್.ಆರ್.ನಾಗೇಂದ್ರ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸಂಸ್ಕೃತ ವಿವಿ ಕುಲಪತಿ ಡಾ.ಪದ್ಮಾ ಶೇಖರ್, ರಾಜಸ್ಥಾನದ ಪತ್ತಮೇಡ ಆಶ್ರಮದ ಶ್ರೀ ದತ್ತಶರಣಾನಂದಜಿ ಸೇರಿದಂತೆ ಹಲವಾರು ಮಂದಿ ಗಣ್ಯರು ಈ ಅಪೂರ್ವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸುವರು.

ಸುಳ್ಳು ಪ್ರಕರಣ ದಾಖಲಿಸಿದ ಕಾರಾಣದಿಂದ ಹನ್ನೆರಡು ವರ್ಷ ಜೈಲುವಾಸ ಅನುಭವಿಸಿದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ)ಯಿಂದ ಕ್ಲೀನ್‍ಚಿಟ್ ಪಡೆದ ಬಳಿಕ ಮೊಟ್ಟಮೊದಲ ಬಾರಿಗೆ ಸಾಧ್ವಿಪ್ರಜ್ಞಾಸಿಂಗ್ ಠಾಕೂರ್ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದು, ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಅಂದು ರಕ್ತಲಿಖಿತ ಹಕ್ಕೊತ್ತಾಯ ಪತ್ರ ಸಮರ್ಪಿಸುವುದು ಕಾರ್ಯಕ್ರಮದ ವಿಶೇಷ.

ಇತಿಹಾಸದಲ್ಲೇ ಮೊದಲ ಬಾರಿಗೆ 108 ಮಂದಿ ಸಂತರು ಗೋಹತ್ಯೆ ನಿಷೇಧಕ್ಕಾಗಿ ಹಕ್ಕೊತ್ತಾಯಪತ್ರ ಸಲ್ಲಿಸುವರು. ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಈಗಾಗಲೇ ರಕ್ತದಿಂದ ಹಕ್ಕೊತ್ತಾಯಪತ್ರ ಬರೆದಿದ್ದು, ಸಮಾರಂಭದಲ್ಲಿ ಗೋಮಾತೆಗೆ ಸಮರ್ಪಿಸುವರು.

RELATED ARTICLES  ನಾಳೆ ಕರ್ನಾಟಕ ಬಂದ್! ಎನೇನು ಇರುತ್ತೆ? ಎನೇನು ಇರಲ್ಲ?

ಭಾರತೀಯ ಗೋ ಪರಿವಾರ- ಕರ್ನಾಟಕ, 48 ದಿನಗಳ ಕಾಲ ರಾಜ್ಯದಲ್ಲಿ ಕೈಗೊಂಡ ಅಭಯ ಗೋಯಾತ್ರೆಯ ಸಮಾರೋಪದಲ್ಲಿ, ವಿನಾಶದ ಅಂಚಿನಲ್ಲಿರುವ ‘ಮಲೆನಾಡು ಗಿಡ್ಡ’ ತಳಿಯನ್ನು ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರೀಮಠ ದತ್ತು ಪಡೆಯಲಿದೆ. ದೇಶದಲ್ಲೇ ಒಂದು ಗೋ ತಳಿಯನ್ನು ಇಡಿಯಾಗಿ ಸಂವರ್ಧನೆ ಹಾಗೂ ಸಂರಕ್ಷಣೆಗಾಗಿ ದತ್ತು ಪಡೆಯುತ್ತಿರುವುದು ಇದೇ ಮೊದಲು.

ಶ್ರೀಮಠದ ಸಾವಿರಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳು, ಗೋಕಿಂಕರರು, ಭಕ್ತರು ಹಾಗೂ ಗೋಪ್ರೇಮಿಗಳು ಸ್ವರಕ್ತಲಿಖಿತ ಹಕ್ಕೊತ್ತಾಯಪತ್ರ ಸಮರ್ಪಿಸುವರು.

ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ- ಸಂವರ್ಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಳುವವರ್ಗದ ಮೇಲೆ ಒತ್ತಡ ಹೇರುವ ಬೃಹತ್ ಹಕ್ಕೊತ್ತಾಯದ ಅಂಗವಾಗಿ ಡಿಸೆಂಬರ್ 3ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿದ ಅಭಯ ಗೋಯಾತ್ರೆಗೆ ಅದ್ಭುತ ಬೆಂಬಲ ವ್ಯಕ್ತವಾಗಿದ್ದು, ಈ ಜನಾಂದೋಲನವನ್ನು ಮನೆ- ಮನಗಳಿಗೆ ತಲುಪಿಸುವಲ್ಲಿ ಅಭಯ ಮಂಗಲ ಮಹತ್ವದ ಪಾತ್ರ ವಹಿಸಲಿದೆ.

ಗವ್ಯೋದ್ಯಮಕ್ಕೆ ಒತ್ತು ನೀಡುವ ಮೂಲಕ ಗೋ ಸಾಕಾಣಿಕೆಯನ್ನು ಆರ್ಥಿಕವಾಗಿಯೂ ಲಾಭದಾಯಕ ಎಂದು ಸಮಾಜಕ್ಕೆ ತೋರಿಸಿಕೊಡುವ ನಿಟ್ಟಿನಲ್ಲಿ ಶ್ರೀಮಠದ ಗೋಶಾಲೆಯಲ್ಲೇ ಈ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕನ್ನಡನಾಡಿನ ಒಂದು ಕೋಟಿಗೂ ಅಧಿಕ ಮಂದಿ ಪ್ರತ್ಯೇಕವಾಗಿ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದು, ಇದರ ಸಮರ್ಪಣೆ ಕಾರ್ಯಕ್ರಮದ ಮತ್ತೊಂದು ವಿಶೇಷ.

RELATED ARTICLES  ನಟ ರಜನಿಕಾಂತ್‌ ಅವರು ಬಿಜೆಪಿಗೆ ಸೇರುತ್ತಾರೆ?

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಜ್ಞರು, ಗಣ್ಯರು, ಗೋ ಸಂಶೋಧಕರು, ಗವ್ಯ ಚಿಕಿತ್ಸಾ ತಜ್ಞರು, ಗೋಪರ ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಗೋಪೂಜೆ, ಗೋಗ್ರಾಸ, ಗೋವಿಚಾರ, ಪ್ರಸ್ತುತಿ, ಅಭಯಾಕ್ಷರ, ಗೋಕಲೆ, ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ರಥಯಾತ್ರೆಯನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಇಷ್ಟೇ ಅಲ್ಲದೇ ಸಭಿಕರೆಲ್ಲರಿಗೆ ಪರಿಶುದ್ಧ ದೇಸಿಹಾಲಿನ ಅಮೃತ ಸವಿಯುವ ಅವಕಾಶ. ಕಾರ್ಯಕ್ರಮದಲ್ಲಿ ಎಲ್ಲರಿಗೂ ಗೋಪೂಜೆಯ ಅವಕಾಶವಿದೆ. ಗೋಸಂರಕ್ಷಣೆಗೆ ನಾಡನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದು ಬೃಹತ್ ಜನಾಂದೋಲನವಾಗಿ ಬೆಳೆದಿದ್ದು, ಸಹಸ್ರಾರು ಗೋಭಕ್ತರು ಈ ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಗೋವಿನ ಹಿರಿಮೆ ಬಗ್ಗೆ ವಿಶೇಷ ಮಾಹಿತಿ, ಗೋಮಾತೆಗೆ ಅಭಯ ನೀಡುವ ಸಂಕಲ್ಪಕ್ಕೆ ಸಹಿಮಾಡುವ ಅಭಯಾಕ್ಷರ, ಗೋವಿನ ಹಿರಿತನ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳಂಥ ವೈವಿಧ್ಯಮಯ ಕಾರ್ಯಗಳಿವೆ. ವಿವಿಧ ಗವ್ಯೋತ್ಪನ್ನಗಳ, ದೆಸಿ ಹಾಲು- ತುಪ್ಪದಿಂದ ತಯಾರಿಸಿದ ಸಿಹಿ ತಿನಸುಗಳ, ಪುಸ್ತಕ, ಸಿ.ಡಿ. ಪ್ರದರ್ಶನ ಮತ್ತು ಮಾರಾಟವೂ ಇದೆ. ಕಾರ್ಯಕ್ರಮಕ್ಕೆ ಮುನ್ನ ಸುತ್ತಮುತ್ತಲು ಗೋರಥ ಸಂಚರಿಸಿ ಜಾಗೃತಿ ಮೂಡಿಸಲಿದೆ.

ಕಳೆದ ವರ್ಷ ಶ್ರೀಮಠದ ವತಿಯಿಂದ ಹಮ್ಮಿಕೊಂಡಿದ್ದ ಮಂಗಲ ಗೋಯಾತ್ರೆಯ ವಿಶಿಷ್ಟ ಪರಿಕಲ್ಪನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದುದನ್ನು ಇಲ್ಲಿ ಸ್ಮರಿಸಬಹುದು. ಈ ಬಾರಿ ಅಭಯ ಮಂಗಲವನ್ನು ಮತ್ತಷ್ಟು ವೈವಿಧ್ಯಮಯ ಹಾಗೂ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತಿದೆ.