ಕಾರವಾರ:ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿ ಮತದಾನದ ಹಕ್ಕು ಪಡೆಯುವುದೂ ಮತದಾರನ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಿತ ಮತದಾರ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಎಲ್. ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ಕಾರವಾರ ಆಕಾಶವಾಣಿಯಲ್ಲಿ ಶುಕ್ರವಾರ ಬೆಳಿಗ್ಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಶ್ರೋತ್ರುಗಳ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದರು. 18 ವರ್ಷ ತುಂಬಿದ ಭಾರತದ ಪ್ರಜೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತದಾನದ ಹಕ್ಕು ಪಡೆಯಬೇಕು ಹಾಗೂ ಬದಲಾವಣೆ, ಪರಿಷ್ಕರಣೆಯಂತ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿ ಇದೆಯೇ ಎಂದು ಖಾತ್ರಿ ಮಾಡಿಕೊಂಡು ಮತದಾನದ ಹಕ್ಕು ಪಡೆಯುವುದು ಅವರ ಕರ್ತವ್ಯವಾಗಿದೆ ಎಂದರು.

RELATED ARTICLES  ಯಶಸ್ವಿಯಾಗಿ ಸಂಪನ್ನವಾದ ಉಪನ್ಯಾಸ -ಸನ್ಮಾನ ಕಾರ್ಯಕ್ರಮ

ಈ ಹಿನ್ನೆಲೆಯಲ್ಲಿಯೇ ಭಾರತ ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ವ್ಯಾಪಕ ಪ್ರಚಾರ ಮಾಡಲಾಗಿದೆ ಅಲ್ಲದೆ, ಈ ಸಂಬಂಧ ಆಯಾ ತಾಲೂಕು ಕಚೇರಿಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಅದರಂತೆ ಮತದಾರರ ಪಟ್ಟಿ ಪರಿಷ್ಕರಣಾ ವೇಳಾಪಟ್ಟಿ ಪ್ರಕಟಿಸಿ ಪ್ರಕ್ರಿಯೆ ನಡೆಯುತ್ತಿದ್ದು ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು, ಹೆಸರು ಕೈಬಿಡುವುದು, ಮತಕ್ಷೇತ್ರ ಬದಲಾಯಿಸುವುದು, ಹೆಸರು, ವಿಳಾಸಗಳ ತಿದ್ದುಪಡಿಸ ಇತ್ಯಾದಿ ಪ್ರಕ್ರಿಯೆಗೆ ಜನವರಿ 22 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗಾಗಿ ನಿಗದಿತ ನಮೂನೆಯಲ್ಲಿ ಮತದಾರರು ತಮ್ಮ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಚುನಾವಣೆ ಆಯೋಗದ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲೂ ಈ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

RELATED ARTICLES  ಶಿರಸಿ ಜಾತ್ರೆ : ನಗರ ಸಭೆಗೆ ಒಟ್ಟು 42.64 ಲಕ್ಷ ರೂ. ಆದಾಯ

ಬೇರೊಂದು ಊರಿನಿಂದ ವ್ಯಾಸಂಗಕ್ಕಾಗಿ ಆಗಮಿಸಿರುವ ಮತಕ್ಷೇತ್ರದಲ್ಲಿ ಮತದಾರರ ನೋಂದಣಿ ಮಾಡಬಹುದೇ, ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಇರುವುದು ಅಪರಾಧವಲ್ಲವೇ, ನೋಂದಣಿ ಸಂದರ್ಭದಲ್ಲಿದ್ದ ಭಾವಚಿತ್ರ ಹಳೆಯದಿದ್ದು ಈಗಿನ ಭಾವಚಿತ್ರ ಅಳವಡಿಸಲು ಅವಕಾಶವಿದೆಯೇ ಎಂಬಿತ್ಯಾದಿ ಸಮಸ್ಯೆಗಳಿಗೆ ಶ್ರೋತೃಗಳು ಕರೆ ಮಾಡಿ ಪರಿಹಾರ ಕಂಡುಕೊಂಡರು. ಆಕಾಶವಾಣಿ ಸುದ್ದಿ ನಿರೂಪಕಿ ಫ್ಲೋರಿನ್ ರೋಶ್ ಸಂದರ್ಶಿಸಿದರು.