ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಇಂಟರ್‌ಕಾಂಟಿನೆಂಟಲ್‌ ಹೋಟೆಲ್‌ ಮೇಲೆ ನಾಲ್ವರು ಬಂದೂಕುದಾರಿಗಳು ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.

ಹೋಟೆಲ್‌ನ ಅಡುಗೆ ಮನೆಯಿಂದ ಕಟ್ಟಡದ ಮುಖ್ಯಭಾಗ ತಲುಪಿರುವ ದಾಳಿಕೋರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಯು ದಾಳಿಕೋರರ ವಿರುದ್ಧ ಪ್ರತಿ ದಾಳಿ ನಡೆಸಿದ್ದು, ಹೋಟೆಲ್‌ ಸಿಬ್ಬಂದಿ ಹಾಗೂ ಅಲ್ಲಿ ತಂಗಿದ್ದವರು ಗಾಬರಿಗೊಂಡು ಹೊರ ಬರುವ ಪ್ರಯತ್ನ ಮಾಡಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

RELATED ARTICLES  ಚಿಕ್ಕಮಗಳೂರು ಜಿಲ್ಲೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳಿಗೆ ನೇಮಕಾತಿ.

ಬಂದೂಕುಗಳು, ರಾಕೆಟ್‌ ಪ್ರೊಪೆಲ್ಡ್‌ ಗ್ರೆನೇಡ್‌ ಹಾಗೂ ಇತರ ಆಯುಧಗಳನ್ನು ದಾಳಿಕೋರರು ಹೊಂದಿರುವುದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಹಲವು ನಾಗರಿಕರನ್ನು ಒತ್ತೆಯಾಗಿಸಿಕೊಂಡಿರುವುದಾಗಿ ವರದಿಯಾಗಿದೆ.

ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿದ್ದು, 6ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್‌ ರಹಿಮಿ ಮಾಹಿತಿ ನೀಡಿದ್ದಾರೆ.

RELATED ARTICLES  ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಹೋಟೆಲ್‌ನಲ್ಲಿ ತಂಗಿರುವ ಅನೇಕರು ಜೀವ ಉಳಿಸಿಕೊಳ್ಳಲು ಕೊಠಡಿಗಳಲ್ಲಿ ಅವಿತಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಉಗ್ರರ ತಂಡ ಕಾಬೂನ್‌ನ ಹೋಟೆಲ್‌ಗಳ ಮೇಲೆ ದಾಳಿ ನಡೆಸುವ ಸಂಭವ ಇರುವುದಾಗಿ ಅಲ್ಲಿನ ಅಮೆರಿಕ ರಾಯಭಾರ ಕಚೇರಿ ಅಮೆರಿಕ ಪ್ರಜೆಗಳಿಗೆ ಗುರುವಾರ ಎಚ್ಚರಿಕೆ ಸಂದೇಶ ರವಾನಿಸಿತ್ತು.

2011ರ ಜೂನ್‌ನಲ್ಲಿ ಇಂಟರ್‌ಕಾಂಟಿನೆಂಟಲ್‌ ಮೇಲೆ ತಾಲಿಬಾನ್‌ ಆತ್ಮಾಹುತಿ ದಾಳಿ ನಡೆದು 21 ಜನರು ಬಲಿಯಾಗಿದ್ದರು