ಕಾರವಾರ: ‘ಕರಾವಳಿಯಲ್ಲಿ ಬಿಜೆಪಿಯವರು ಹಿಂದೂಗಳ ಹೆಣದ ಮೇಲೆ, ಕಾಂಗ್ರೆಸ್‌ನವರು ಮುಸ್ಲಿಮರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇದೆಂತಹ ಕೆಳಮಟ್ಟದ ರಾಜಕಾರಣ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪ್ರಶ್ನಿಸಿದರು. ಆನಂದ್ ಅಸ್ನೋಟಿಕರ್ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದ ಸಂಬಂಧ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮುಖಂಡರಿಗೆ, ‘ಹಿಂದೂಗಳನ್ನು ಜಾಸ್ತಿ ದ್ವೇಷಿಸಬೇಡಿ. ಮುಸ್ಲಿಮರನ್ನು ಜಾಸ್ತಿ ಪ್ರೀತಿಸಬೇಡಿ’ ಎಂದು ಹೇಳಿದ್ದಾರೆ. ಇಂತಹ ಕಳಪೆದರ್ಜೆಯ ರಾಜಕಾರಣ ಮಾಡುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಅನಿವಾರ್ಯವಾಗಿ ದೂರವಿಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೊಡ್ಡ ನಾಯಕ ಎಂದು ಅವರ ಬೆಂಬಲಿಗರು ಭಾವಿಸಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಅವರ ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಒಂದೇ ಸ್ಥಾನ. ಮುಂದಿನ ಚುನಾವಣೆಯಲ್ಲಿ ಅವರು ಗೆದ್ದರೆ ಸಾಕು ಎನ್ನುವ ಸ್ಥಿತಿಯಿದೆ ಎಂದು ವ್ಯಂಗ್ಯವಾಡಿದರು.

‘ನಾನು ಬಿಜೆಪಿ ಟಿಕೆಟ್ ಕೇಳಿಲ್ಲ’:
‘ಬಿಜೆಪಿಯಿಂದ ಸ್ಪರ್ಧಿಸಲು ನನಗೆ ಟಿಕೆಟ್ ಬೇಕೆಂದು ಕೇಳಿ ಯಾರ ಮನೆಗೂ ನಾನು ಹೋಗಿಲ್ಲ. ಅವರನ್ನು ಭೇಟಿಯಾಗಲು ಸಮಯ ನೀಡುವಂತೆ ದೂರವಾಣಿ ಮೂಲಕ ಕೇಳಿಕೊಂಡಿದ್ದೆನಷ್ಟೇ’ ಎಂದು ಸ್ಪಷ್ಟಪಡಿಸಿದರು.

RELATED ARTICLES  ಜಯಾ ಯಾಜಿ ಶಿರಾಲಿ ಗೌರವಾರ್ಥ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ ಜಿಲ್ಲಾ ಕ.ಸಾ.ಪ.

ಇದಕ್ಕೂ ಮೊದಲು ಮಾತನಾಡಿದ ಆನಂದ ಅಸ್ನೋಟಿಕರ್, ‘ಈ ರ‍್ಯಾಲಿ ಕಾರವಾರದ ಜನರ ಸ್ವಾಭಿಮಾನ ಕೂಗು. ನಾನು ಚುನಾವಣೆಗೆ ಸಿದ್ಧತೆಯ ಕೊನೆಯ ಹಂತದಲ್ಲಿ ರಾಜಕಾರಣಕ್ಕೆ ವಾಪಸಾದೆ ಎಂದು ಟೀಕಾಕಾರರು ಹೇಳುತ್ತಾರೆ. ಆದರೆ, ಎದುರಾಳಿಗಳು ನನ್ನ ಜನರನ್ನು ತುಚ್ಛವಾಗಿ ಕಂಡಿದ್ದಕ್ಕಾಗಿ ನಾನು ರಾಜಕಾರಣಕ್ಕೆ ವಾಪಸಾಗಿದ್ದೇನೆಯೇ ವಿನಾ ಸ್ವಾರ್ಥಕ್ಕಾಗಿ ಅಲ್ಲ’ ಎಂದು ಹೇಳಿದರು.

‘ವಿವಿಧ ಬೃಹತ್ ಯೋಜನೆಗಳಿಗೆ ಜಾಗ ನೀಡಿದ ಈ ಜಿಲ್ಲೆಯಲ್ಲಿ ದೇಶದಲ್ಲೇ ಅತಿಹೆಚ್ಚು ನಿರಾಶ್ರಿತರಿದ್ದಾರೆ. ಇಲ್ಲಿ ಬಹಳ ಬಡತನವಿದೆ. ಪಕ್ಕದಲ್ಲೇ ಸಮುದ್ರವಿದ್ದರೂ ಕುಡಿಯುವ ನೀರಿಗೆ ಸಮಸ್ಯೆಯಿದೆ. ಘಟ್ಟದ ಮೇಲೆ ಪ್ರತಿ ರೈತರಿಗೆ 5ರಿಂದ 10 ಎಕರೆ ಜಮೀನಿದೆ. ಆದರೆ, ಕರಾವಳಿಯಲ್ಲಿ ಒಂದು ಗುಂಟೆ ಜಮೀನು ಸಿಗಲೂ ಪರದಾಡಬೇಕು. ಇಲ್ಲಿನ ನಿರಾಶ್ರಿತರಿಗೆ ಕನಿಷ್ಠ ಸೌಲಭ್ಯ ಸಿಗುವಂತಾಗಬೇಕು. ಇದಕ್ಕಾಗಿ ನಾವು ಎಲ್ಲರ ಜನತೆ ಸಹಕಾರ ಬಯಸುತ್ತೇವೆ’ ಎಂದು ಹೇಳಿದರು.

RELATED ARTICLES  ಗೊತ್ತಿದ್ದೂ ಗೊತ್ತಿಲ್ಲದಂತಿರುವ ವಿದ್ಯುತ್ ಇಲಾಖೆ ಭಾರೀ ಅಪಾಯದ ಸೂಚನೆ ಕೊಡುತ್ತಿರುವ ಮರ

ಇದಕ್ಕೂ ಮೊದಲು ಆನಂದ್ ಅಸ್ನೋಟಿಕರ್ ಅವರ ಚಿತ್ರವಿದ್ದ ಮುಖವಾಡ ಧರಿಸಿದ ಸುಮಾರು ಎರಡು ಸಾವಿರ ಕಾರ್ಯಕರ್ತರು ಕೋಡಿಬಾಗ್‌ನಿಂದ ನಗರಕೇಂದ್ರದಲ್ಲಿರುವ ಅಂಬೇಡ್ಕರ್ ವೃತ್ತದವರೆಗೆ ಬೈಕ್‌ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಆರ್.ನಾಯಕ, ಮುಖಂಡರಾದ ಶಶಿಭೂಷಣ ಹೆಗಡೆ, ಪ್ರದೀಪ್ ನಾಯಕ, ರವೀಂದ್ರ ನಾಯಕ, ಇನಾಯತ್ ಅವರೂ ಇದ್ದರು.