ಕುಮಟಾ: ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಆಶ್ರಯದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಒಂದು ದಿನದ ಸಮಾಜ ವಿಜ್ಞಾನ ವಿಷಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನೆರವಾಗುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದೈಹಿಕ ಶಿಕ್ಷಕ ಸಂಯೋಜಕರಾದ ಎಸ್.ಎಸ್.ಭಟ್ಟ ಸಮಾಜ ವಿಜ್ಞಾನ ವಿಷಯದ ಜಟಿಲತೆ ಹಾಗೂ ಅದನ್ನು ಪರೀಕ್ಷಾ ದೃಷ್ಠಿಯಿಂದ ಅಭ್ಯಸಿಸುವ ಕ್ರಮಗಳ ಕುರಿತು ಮಾತನಾಡಿದರು. ಶಿಕ್ಷಣ ಸಂಯೋಜಕ ನಿತ್ಯಾನಂದ ಭಂಡಾರಿ ಅರ್ಧ ವಾರ್ಷಿಕ ಪರೀಕ್ಷಾ ಪರಿಣಾಮ ವಿಶ್ಲೇಷಿಸುತ್ತಾ ನಿಧಾನ ಕಲಿಕೆಯ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರಬೇಕಾಗ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು. ಸಂಘದ ಅಧ್ಯಕ್ಷ ದಯಾನಂದ ದೇಶಭಂಡಾರಿ ಸಮಾಜ ವಿಜ್ಞಾನ ಸಂಘದ ಧ್ಯೇಯೋದ್ದೇಶಗಳ ಬಗ್ಗೆ ಪ್ರಸ್ತುತ ಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಪರೀಕ್ಷಾ ಒತ್ತಡ ವಿದ್ಯಾರ್ಥಿಗಳಿಗಿಂತ ಶಿಕ್ಷಕರಿಗೇ ಅಧಿಕವಾಗಿ ಕಾಡುತ್ತಿದ್ದು ಪ್ರಸ್ತುತ ವೃತ್ತಿ ಸಂದಿಗ್ಧತೆಗೆ ಕಾರಣವಾಗುತ್ತಿರುವುದು ಶೋಚನೀಯ ಎಂದು ಅಭಿಪ್ರಾಯ ಪಟ್ಟರು. ಆ ಕಾರಣದಿಂದ ಇಂತಹ ಕಾರ್ಯಾಗಾರಗಳು ಉತ್ತಮ ಫಲಿತಾಂಶಕ್ಕೆ ಮುನ್ನುಡಿಯಾಗಬೇಕೆಂದರು.
ಕುಮಾರಿಯರಾದ ಶ್ರೀಲಕ್ಷ್ಮೀ ಭಟ್ಟ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಪ್ರದೀಪ ನಾಯ್ಕ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಿಜಯಕುಮಾರ ನಾಯ್ಕ ವಂದಿಸಿದರು. ಎಸ್.ಕೆ.ಪಿ.ಪ್ರೌಢಶಾಲೆಯ ಎಚ್.ಟಿ.ತಲ್ಲೂರ ನಿರೂಪಿಸಿದರು.