ಶಿರಸಿ: ಕರ್ನಾಟಕದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಘೋಷಣೆಯಾಗಿದ್ದರೂ ಈವರೆಗೆ ಅಸ್ತಿತ್ವಕ್ಕೆ ಬಂದಿಲ್ಲ. ಶೀಘ್ರ ಇದಕ್ಕೆ ಚಾಲನೆ ನೀಡಬೇಕು ಎಂದು ಸಿದ್ದಾಪುರದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನದ ಮುಖ್ಯಸ್ಥ, ಬಡಗಿನ ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯಿಂದ ಯಕ್ಷಗಾನವನ್ನು ಪ್ರತ್ಯೇಕಗೊಳಿಸಿದ್ದು ಯಕ್ಷಗಾನ ಕಲೆಯ ಉಳಿವು ಹಾಗೂ ಬೆಳವಣಿಗೆಗೆ ಪ್ರೋತ್ಸಾಹಕ ಎಂದೇ ಭಾವಿಸಿದ್ದೇವೆ. ಆದರೆ, ಘೋಷಣೆಯಾಗಿ ವರ್ಷ ಆಗುತ್ತಿದ್ದರೂ ಈವರೆಗೆ ಅಧ್ಯಕ್ಷ, ಸದಸ್ಯರ ನೇಮಕಾತಿ ಆಗಿಲ್ಲ. ಕಳೆದ ಆಗಷ್ಟ 26ಕ್ಕೆ ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಯ ಸದಸ್ಯರ ಅವಧಿ ಮುಗಿದು ಮೂರು ತಿಂಗಳಾದರೂ ಪುನರ್ ರಚನೆ ಆಗಿಲ್ಲ ಎಂದಿರುವ ಅವರು, ಯಕ್ಷಗಾನದ ಉಳಿವಿಗೆ ಬೆಂಬಲಿಸುವ ಕಾರ್ಯಕ್ಕೆ ಅಕಾಡೆಮಿಗಳು ಮುಂದಾಗಬೇಕು ಎಂದೂ ಆಶಿಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿಂದು ಕೊರೋನಾ ಆರ್ಭಟ

ನಾಮ ನಿರ್ದೇಶನ ಹೊರತುಪಡಿಸಿ ಅಕಾಡೆಮಿಗೆ 16 ಸದಸ್ಯರಾಗಬೇಕಿದ್ದು, ಈ ಸದಸ್ಯರಲ್ಲಿ ಕನಿಷ್ಠ ಐದು ಸದಸ್ಯರಾದರೂ ಉತ್ತರ ಕನ್ನಡದವರಿಗೆ ಅವಕಾಶ ಆಗಬೇಕು. ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿಗೆ ಶಂಭು ಹೆಗಡೆ ಕೆರೆಮನೆ ಅವರು ಅಧ್ಯಕ್ಷರಾಗಿದ್ದರು. 2007ರಲ್ಲಿ ಇದು ಪ್ರತ್ಯೇಕಗೊಂಡು ಯಕ್ಷಗಾನ ಬಯಲಾಟ ಅಕಾಡೆಮಿ ಆದರೂ ಮೂರು ಅವಧಿಯಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನದಲ್ಲಿ ಉತ್ತರ ಕನ್ನಡ, ಮಲೆನಾಡು ಭಾಗದವರಿಗೆ ಅವಕಾಶ ಸಿಕ್ಕಿಲ್ಲ.

ಈ ಬಾರಿಯ ಅಧ್ಯಕ್ಷತೆ ಸ್ಥಾನ ಈವರೆಗೆ ವಂಚಿತ ಪ್ರಾದೇಶಿಕ ಕ್ಷೇತ್ರಕ್ಕೆ ಸಿಗಬೇಕು. ಆಡಳಿತಾತ್ಮಕ ಅನುಕೂಲ ದೃಷ್ಟಿಯಲ್ಲಿ ಬೆಂಗಳೂರಿನ ಕನ್ನಡ ಭವನ ಅಥವಾ ಮಧ್ಯವರ್ತಿ ಜಿಲ್ಲೆಯಾಗುವ ಉತ್ತರ ಕನ್ನಡದಲ್ಲಿ ಸ್ಥಾಪನೆ ಆಗಬೇಕು. ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಅಕಾಡೆಮಿ ಕಚೇರಿಗಳೂ ಇಲ್ಲ ಎಂದೂ ಪ್ರಸ್ತಾಪಿಸಿದ್ದಾರೆ.
ತೆಂಕಿನ ಜೊತೆಗೆ ಬಡಗಿನ ಯಕ್ಷಗಾನಗಳ ದಾಖಲೀಕರಣ, ಕೃತಿಗಳು, ಸಾಧಕರ ಮಾಹಿತಿಗಳ ಕೈಪಿಡಿಗಳು ಮುದ್ರಣಗೊಳ್ಳಲು ನೆರವಾಗಬೇಕು. ಪ್ರದರ್ಶನಗಳ ಜೊತೆಗೆ ತರಬೇತಿಗೂ ಆದ್ಯತೆ ಕೊಡಬೇಕು. ಇದಕ್ಕಾಗಿಯೇ ಬಜೆಟ್‍ನಲ್ಲಿ ಕನಿಷ್ಠ 50 ಕೋ.ಟಿ ರೂ. ಆದರೂ ಸರಕಾರ ಮೀಸಲಿಟ್ಟು ಕಲೆ ಪ್ರೋತ್ಸಾಹಿಸಬೇಕು. ಅನ್ಯಭಾಷೆಯ ಸೋಂಕಿಲ್ಲದೇ ಶುದ್ಧ ಕನ್ನಡದ ಕಲೆ ಯಕ್ಷಗಾನವನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಯಕ್ಷಗಾನ ಅಕಾಡೆಮಿ ರಾಷ್ಟ್ರಕ್ಕೇ ಮಾದರಿಯಾಗುವಂತೆ ಸರಕಾರ ಪ್ರೋತ್ಸಾಹಿಸಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

RELATED ARTICLES  ಬಸ್ ನಲ್ಲಿ ಮದ್ಯ ಸಾಗಾಟ : ಪೊಲೀಸ್ ದಾಳಿ.