ಶಿರಸಿ : ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ನೀರಿನ ಕೊರತೆ ಉಂಟಾಗುತ್ತಿದ್ದು, ನಗರಸಭೆಯವರು ಪ್ರತ್ಯೇಕ ನೀರಿನ ಸೌಲಭ್ಯ ಕಲ್ಪಿಸುವಂತೆ ಸೂಚಿಸಬೇಕು ಎಂದು ತಾಲೂಕಾ ವೈಧ್ಯಾಧಿಕಾರಿ ಡಾ.ವಿನಾಯಕ ಭಟ್ ತಾಪಂ ಸಾಮಾನ್ಯ ಸಭೆಯಲ್ಲಿ ಕೋರಿದರು‌.

ಇಲ್ಲಿನ ತಾಪಂ ಸಭಾಭವನದಲ್ಲಿ ಮಂಗಳವಾರ ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 20 ಜನ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗಿದೆ. ಆದರೆ ನೀರಿನ ಕೊರತೆ ಉಂಟಾಗಿದೆ. ನಗರಸಭೆಯಿಂದ ಈ ಘಟಕಕ್ಕೆ ಪ್ರತ್ಯೇಕ ನೀರಿನ ಸೌಲಭ್ಯ ಕಲ್ಪಿಸುಕೊಡಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆಯ ವಿಚಾರವಾಗಿ ಮಾತನಾಡಿದ ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಶಿರಸಿ ತಾಲೂಕಿನಲ್ಲಿ 50 ವರ್ಷಕ್ಕೂ ಹೆಚ್ಚು ಅವಧಿ ಪೂರೈಸಿದ ಶಾಲೆಗಳು ಸಾಕಷ್ಟಿದ್ದು, ಇದರಲ್ಲಿ ಅನೇಕ ಶಾಲೆಗಳು ಬೀಳುವ ಹಂತದಲ್ಲಿವೆ. ಸರ್ಕಾರ ಹೊಸ ಕಟ್ಟಡ ಮಂಜೂರಿ ಮಾಡಬೇಕು. ಅದೇ ರೀತಿ ಶಾಲೆಗಳ ದುರಸ್ಥಿಗೆ ಈಗ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಜಿಲ್ಲಾಧಿಕಾರಿ ಹೆಡ್‍ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ತಾಲೂಕಿನ ಬೀಳೂರ ಹಾಗೂ ದಾಸನಕೊಪ್ಪ ಶಾಲೆ ಇಂದೋ ನಾಳೆಯೋ ಬೀಳುವ ಹಂತದಲ್ಲಿವೆ. ಮಣ್ಣಿನ ಗೋಡೆಯ ಶಾಲೆಗಳು ಸಹ ಶಿರಸಿ ತಾಲೂಕಿನಲ್ಲಿ ಸಾಕಷ್ಟಿವೆ. ಸರ್ಕಾರಕ್ಕೆ ನಿರ್ವಹಣೆ ಅನುದಾನ ಮತ್ತು ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

RELATED ARTICLES  ನಾಳೆ ನಡೆಯಲಿದೆ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಶ್ರೀ ಶೆಜ್ಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

ಸರ್ಕಾರ ಬಡ ಫಲಾನುಭವಿಗಳಿಗೆ ನೀಡುವ ಆಶ್ರಯ ಮನೆ ಮಂಜೂರಿಗೆ ಆದಾಯ ಪ್ರಮಾಣಪತ್ರ ಕೇಳುತ್ತಿರುವುದು ಅವೈಜ್ಞಾನಿಕವಾಗಿದೆ. ಬಿಪಿಎಲ್ ಕಾರ್ಡೆ ಬಡತನ ರೇಖೆಗಿಂತ ಕೆಳಗಿರುವವರು ಎಂದು ಹೇಳಿರುವಾಗ ಆದಾಯ ಪ್ರಮಾಣಪತ್ರ ಏಕೆ ಬೇಕು. ಆಶ್ರಯ ಮನೆಗೆ 32 ಸಾವಿರದೊಳಗೆ ಆದಾಯ ಇರಬೇಕೆಂಬ ನಿಯಮವಿದೆ. ಕಂದಾಯ ಇಲಾಖೆಯವರು 1 ಲಕ್ಷ ರು ಆದಾಯ ನಮೂದಿಸುತ್ತಿದ್ದಾರೆ. ಇದರಿಂದ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಬಿಪಿಎಲ್ ಕಾರ್ಡ ಇದ್ದರೂ ಆದಾಯ ಕೇಳುವುದು ಅವೈಜ್ಞಾನಿಕವಾಗಿದ್ದು, ಇದರಿಂದ ವಿನಾಯ್ತಿ ನೀಡಬೇಕು ಎಂದರು.

RELATED ARTICLES  ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದ ಪ್ರಯಾಣಿಕ ಕುಮಟಾ ಸಮೀಪದ ಹಿರೇಗುತ್ತಿ ಬಳಿ ಹೃದಯಾಘಾತದಿಂದ ಸಾವು

ತಾಲೂಕಿನಲ್ಲಿ 50 ವರ್ಷ ಪೂರೈಸಿರುವ ಅನೇಕ ಶಾಲೆಗಳು ಬೀಳುವ ಹಂತದಲ್ಲಿದ್ದು, ಶಿಥಿಲಾವಸ್ಥೆಗೆ ತಲುಪಿರುವ ಶಾಲಾ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ಸರ್ಕಾರ ಮಂಜೂರಿ ಮಾಡಬೇಕು ಹಾಗೂ ವಿವಿಧ ಇಲಾಖೆಗಳಲ್ಲಿ ದೈಹಿಕ ಅಂಗವಿಕಲರಿಗೆ ಶೆ.೩ ರಷ್ಟು ಅನುದಾನವಿದ್ದು, ಅದನ್ನು ಬುದ್ಧಿಮಾಂಧ್ಯರು, ಕಿವುಡರು, ಕುರುಡರಿಗೂ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಎರಡೂ ವಿಷಯಗಳ ಕುರಿತು ಠರಾವು ಸ್ವೀಕರಿಸಲಾಯಿತು. ಈ ವೇಳೆ ತಾಪಂ ಇಓ ಕೆ.ವಿ.ಕೂರ್ಸೆ ಉಪಸ್ಥಿತರಿದ್ದರು.