ಜೋಯಿಡಾ : ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವವು ಜ. 24 ರಿಂದ ಫೆ.3 ರ ವರೆಗೆ ನಡೆಯಲಿದೆ.
ಈ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು. ದೇವಸ್ಥಾನದ ಸಮೀಪ 60 ಕೊಠಡಿ ಹೊಂದಿರುವ ಯಾತ್ರಿ ನಿವಾಸ ನಿರ್ಮಾಣಗೊಳ್ಳುತ್ತಿದ್ದು, ಅದರ ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದೆ. ಜಾತ್ರೆಯೊಳಗೆ ಈ ಕೊಠಡಿಗಳು ವಾಸಕ್ಕೆ ಯೋಗ್ಯವಾಗಿ ಲಭ್ಯವಾದರೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಯಾತ್ರಿ ನಿವಾಸವನ್ನು ಉದ್ಘಾಟಿಸಲಿದ್ದಾರೆ ಎಂದು ಚನ್ನ ಬಸವೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ಗಂಗಾಧರ ಚನ್ನಪ್ಪ ಕಿತ್ತೂರ ಮಾಹಿತಿ ನೀಡಿದ್ದಾರೆ.
ಇನ್ನು 400 ಮಂದಿ ಉಳಿದುಕೊಳ್ಳಲು ವಸತಿ ನಿಲಯಗಳ ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 1 ರಂದು ಸಂಜೆ 4ಕ್ಕೆ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸಚಿವ ಆರ್.ವಿ.ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಚಿವರಾದ ಎಂ.ಬಿ.ಪಾಟೀಲ, ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೇಕರ್, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ, ಶಾಸಕ ಡಾ.ವಿಶ್ವನಾಥ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮುಕಾಶಿ ಮಾತನಾಡಿ, 10 ಶೌಚಾಲಯಗಳನ್ನು ದೇವಸ್ಥಾನದ ಸುತ್ತಮುತ್ತ ನಿರ್ಮಿಸಲಾಗಿದೆ. ಜಾತ್ರೆಯ ವೇಳೆ 60 ತಾತ್ಕಾಲಿಕ ಶೌಚಾಲಯಗಳನ್ನು ಪಂಚಾಯಿತಿಯಿಂದ ವ್ಯವಸ್ಥೆ ಮಾಡಲಾಗುತ್ತದೆ. 4 ಕುಡಿಯುವ ನೀರಿನ ತೊಟ್ಟಿಗಳನ್ನು ಇಡಲಾಗುತ್ತಿದ್ದು, ಟ್ಯಾಂಕರ್ ಗಳಿಂದಲೂ ಕೂಡ ನೀರಿನ ಪೂರೈಕೆ ಮಾಡಲಾಗುತ್ತದೆ. ಅಗತ್ಯವುಳ್ಳವರಿಗೆ ಸ್ಥಳದಲ್ಲೇ ಉಚಿತ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತದೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಟ್ ಮಾತನಾಡಿ, ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ ಉಪಾಹಾರ ಹಾಗೂ ಎರಡು ಹೊತ್ತು ಊಟವನ್ನು ಉಚಿತವಾಗಿ ಭಕ್ತರಿಗೆ ನೀಡಲಾಗುತ್ತಿದೆ. ಜಾತ್ರೆಯ ವೇಳೆ ವಿಶೇಷ ಪೂಜೆಗಳು ನಡೆಯಲಿವೆ. ವಾಹನಗಳ ನಿಲುಗಡೆಗೆ ರೈತರ ಜಮೀನು ಬಳಕೆ ಮಾಡಿಕೊಂಡು ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರು ಸಹಕರಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಜಾಗವನ್ನು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.