ದಾವೋಸ್: ದಾವೋಸ್ ನಲ್ಲಿ ನಡೆಯುತ್ತಿರುವ 48 ನೇ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಶಾಂತಿ-ಸ್ಥಿರತೆ-ಭದ್ರತೆ ವಿಷಯದಲ್ಲಿ ಜಗತ್ತು ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಜಾಗತಿಕ ಒಗ್ಗಟ್ಟು 21 ನೇ ಶತಮಾನದಲ್ಲಿ ಪ್ರಮುಖವಾದದ್ದು ಎಂದು ಹೇಳಿದ್ದಾರೆ.
ಕಳೆದ ಬಾರಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತದ ಅಂದಿನ ಪ್ರಧಾನಿ ಹೆಚ್ ಡಿ ದೇವೇಗೌಡರು ಭಾಗವಹಿಸಿದ್ದಾಗ ಭಾರತದ ಜಿಡಿಪಿ 400 ಬಿಲಿಯನ್ ಡಾಲರ್ ಗಿಂತಲೂ ಕಡಿಮೆ ಇತ್ತು, ಆದರೆ ಈಗ ಭಾರತದ ಜಿಡಿಪಿ ಈಗ 6 ಪಟ್ಟು ಹೆಚ್ಚಿದೆ ಎಂದು ಮೋದಿ ಹೇಳಿದ್ದಾರೆ.
ತಂತ್ರಜ್ಞಾನದಿಂದಾಗಿ ಇಂದಿನ ಜೀವನ ಗತಿ ಬದಲಾಗಿದೆ, ವಿಶ್ವದ ಎದುರು ಈಗ ಶಾಂತಿ ಸ್ಥಿರತೆ ಸುರಕ್ಷತೆ ಬಹುದೊಡ್ಡ ಸವಾಲುಗಳಾಗಿವೆ, ಜಾಗತಿಕ ತಾಪಮಾನ ಜಗತ್ತಿನ ಮುಂದಿರುವ ಬಹುದೊಡ್ಡ ಅಪಾಯ, ಹಾಗೆಯೇ ಎಲ್ಲಾ ರಾಷ್ಟ್ರಗಳು ಆತ್ಮಕೇಂದ್ರಿತವಾಗುತ್ತಿರುವುದು ಮತ್ತೊಂದು ದೊಡ್ಡ ಅಪಾಯ, ಜಾಗತಿಕ ತಾಪಮಾನ, ಭಯೋತ್ಪಾದನೆ ಅಪಾಯಗಳನ್ನು ತಡೆಗಟ್ಟಲು 21 ನೇ ಶತಮಾನದಲ್ಲಿ ಜಾಗತಿಕ ಒಗ್ಗಟ್ಟು ಪ್ರಮುಖವಾದದ್ದು, ಎಂದು ಹೇಳಿರುವ ಪ್ರಧಾನಿ ವಸುದೈವ ಕುಟುಂಬಕಂ ಶ್ಲೋಕವನ್ನು ಪಠಿಸಿದ್ದಾರೆ.
ಇದೇ ವೇಳೆ ಭಯೋತ್ಪಾದನೆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ತಾರತಮ್ಯ ಮಾಡುವುದೂ ಸಹ ಅಪಾಯಕಾರಿ ಎಂದು ಮೋದಿ ಹೇಳಿದ್ದಾರೆ.