ಸೂರ್ಯನನ್ನು ಆರಾಧಿಸುವ ರಥ ಸಪ್ತಮಿ ದಿನ. ಈ ದಿನ ಬಹಳ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ ಈಗಿನ ದಿನಗಳಲ್ಲಿ ಯೋಗ ಮಾಡುವವರ ಸಂಖ್ಯೆ ಹೆಚ್ಚು. ಯೋಗಕ್ಕೂ ಸೂರ್ಯನಿಗೂ ಬಹಳ ಸಂಬಂಧ ಇದೆ.

ರಥ ಸಪ್ತಮಿ ಪ್ರತಿ ವರ್ಷ ಮಾಘ ಶುಕ್ಲ ಸಪ್ತಮಿಯಂದು ಬರುವುದು. ಇದನ್ನು ಸೂರ್ಯನ ಜನ್ಮ ದಿನವೆಂದು ಕರೆಯುತ್ತಾರೆ. ಸೂರ್ಯನಿಲ್ಲದೇ ಜಗತ್ತೇ ಇಲ್ಲ. ಎಲ್ಲವೂ ಸೂರ್ಯನಿಂದಲೇ. ಪ್ರಕೃತಿಯಲ್ಲಿ ಎಲ್ಲ ಜೀವಿಗಳ ಮೇಲೆ ಸೂರ್ಯನ ಪರಿಣಾಮ ಇದ್ದೇ ಇರುತ್ತದೆ.

ರಥ ಸಪ್ತಮಿಯಂದು ಸೂರ್ಯನ ಆರಾಧನೆಯೇ ಮುಖ್ಯ. ಮನುಷ್ಯನ ಕೋರಿಕೆ ಹಲವು ಇರುತ್ತದೆ. ರಥ ಸಪ್ತಮಿ ದಿನ ಮನುಷ್ಯರು ಕ್ರಮಬದ್ಧವಾಗಿ ಆತ್ಮವಿಶ್ವಾಸ ಇಟ್ಟು ಸೂರ್ಯ ದೇವರಲ್ಲಿ ಕೇಳಿದ ಕೋರಿಕೆಗಳು ಫಲಪ್ರದವಾಗುತ್ತದೆ ಎಂಬುದು ಅನುಭವಿಗಳ ಮಾತು.

ಸ್ಕಂದ, ವರಾಹ ಪುರಾಣಗಳಲ್ಲಿ ಸೂರ್ಯ, ಸೂರ್ಯೋಪಾಸನೆಯನ್ನು ಬಹಳ ಸವಿಸ್ತಾರವಾಗಿ ತಿಳಿಸಲಾಗಿದೆ. ಚಲನವಲನ, ಆರೋಗ್ಯ, ಫಲವತ್ತಾದ ಬೆಳೆ ಬೆಳೆಯುವುದಕ್ಕಾಗಿ ಸೂರ್ಯ ಆರಾಧನೆ ಬೇಕೇ ಬೇಕು. ಮಕರ ಸಂಕ್ರಮಣದ ನಂತರ ಸೂರ್ಯ ಉತ್ತರಾಯಣ ಮಾಡುವ ಸಮಯ. ಸೂರ್ಯ ಉತ್ತರ ದಿಕ್ಕಿಗೆ ಚಲಿಸುವ ಸಮಯ ಮನುಷ್ಯನ ದೇಹದಲ್ಲಿ ನಾನಾ ಥರದ ಕಾಯಿಲೆ, ಸೋಂಕು ಬರುತ್ತದೆ. ಇಂಥ ಸಮಯದಲ್ಲಿ ರಥ ಸಪ್ತಮಿಯ ದಿನ ನಿಯಮ ಪ್ರಕಾರ ಸೂರ್ಯನ ಆರಾಧನೆ ಮಾಡಿದರೆ ರೋಗಾಣುಗಳು ದೇಹದಿಂದ ಹೊರಗೆ ಹೋಗುವುದು.

RELATED ARTICLES  ಬಾಲಮಂದಿರ ಆವರಣದಲ್ಲಿ ಮಗುವನ್ನು ಬಿಟ್ಟುಹೋದ ಪಾಲಕರು..!

ರೋಗಾಣುಗಳನ್ನು ನಾಶ ಮಾಡುವಂಥ ವಿಶೇಷ ಶಕ್ತಿ ಸೂರ್ಯನಿಗಿದೆ. ಸೂರ್ಯ ನಮಸ್ಕಾರಗಳು ಮೊದಲಿನಿಂದಲೂ ಇತ್ತು. ರೋಗ ಪೀಡಿತರು ಈ ದಿನ ಸೂರ್ಯಾರಾಧನೆ ಮಾಡಿದರೆ ಇವರಿಗೆ ಕಾಯಿಲೆ ಬೇಗ ಗುಣವಾಗುತ್ತದೆ. ಯೋಗದಲ್ಲಿ ಮೊದಲು ಸೂರ್ಯ ನಮಸ್ಕಾರ ಮಾಡಬೇಕು. ಇದರಿಂದ ಉಸಿರಾಟ ವ್ಯವಸೆ ಸರಿಯಾಗುತ್ತದೆ.
ಈ ದಿನ ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರಗಳಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅಘ್ರ್ಯ ನೀಡಿದರೆ ಪೂರ್ವಜನ್ಮ ಹಾಗೂ ಈ ಜನ್ಮದ ಪಾಪ ನಾಶವಾಗುತ್ತದೆ ಎಂಬುದು ಪ್ರಾಚೀನ ಕಾಲದಿಂದಲೂ ಬಂದ ನಂಬಿಕೆ.

ದ್ವಾಪರ ಯುಗದಲ್ಲಿ ಯಶೋವರ್ಮ ಎಂಬ ರಾಜನ ಮಗ ಜನಿಸಿದಾಗಲೇ ರೋಗಿಷ್ಟನಾಗಿದ್ದ. ಈ ಬಗ್ಗೆ ಜ್ಯೋತಿಷರಿಂದ ವಿವರ ಕೇಳಿದಾಗ, ‘ಇದು ಸಂಚಿತ ಕರ್ಮದಿಂದ ಬಂದ ಕಾಯಿಲೆ. ಇದಕ್ಕೆ ಪರಿಹಾರ ರಥ ಸಪ್ತಮಿಯಂದು ಸೂರ್ಯನ ಆರಾಧನೆ ಮಾಡಿದರೆ ರಾಜ ಪುತ್ರ ಆರೋಗ್ಯವಂತನಾಗಿ ಪ್ರಭಾವಶಾಲಿಯಾಗುತ್ತಾನೆ’ ಎಂದು ಹೇಳಿದರು.
ಹೀಗಾಗಿ ರಥಸಪ್ತಮಿಯ ದಿನ ಸೂರ್ಯನನ್ನು ಆರಾಧಿಸಲಾಯಿತು. ಇದರಿಂದ ರಾಜ ಪುತ್ರ ಆರೋಗ್ಯವಂತನಾದನು. ಇದು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಧರ್ಮರಾಜನಿಗೆ ಹೇಳಿದ ಕಥೆ. ರಾಮಾಯಣ, ಮಹಾಭಾರತದಲ್ಲಿಯೂ ಸೂರ್ಯನ ಆರಾಧನೆ ಮಾಡಿದ ಉಲ್ಲೇಖ ಇದೆ. ರಾಮಾಯಣದಲ್ಲಿ ರಾವಣನನ್ನು ಗೆಲ್ಲಬೇಕಾದರೆ ಶ್ರೀ ರಾಮನು ಆದಿತ್ಯ ಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದ ಉಲ್ಲೇಖ ಇದೆ.

RELATED ARTICLES  ಪ್ರದೋಷ ಮಹಿಮೆ

ಜ್ಯೋತಿಷ ಶಾಸ್ತ್ರದ ಪ್ರಕಾರ ಅವರವರ ಜನ್ಮ ಕುಂಡಲಿಯನ್ನು ಪರಿಶೀಲಿಸಿದಾಗ ಕುಂಡಲಿಯಲ್ಲಿ ರವಿಯು ಬಲಹೀನಾಗಿದ್ದರೆ, ವಕ್ರನಾಗಿದ್ದರೆ, ಇಂಥವರು ರಥ ಸಪ್ತಮಿಯ ದಿನ ನದಿಯಲ್ಲಿ ಸ್ನಾನ ಮಾಡಿ ಸೂರ್ಯ ಆರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಶುಭ ಕೆಲಸಗಳನ್ನು ಮಾಡಲು ಒಳ್ಳೆಯ ದಿನ. ಹರಳುಗಳನ್ನು ಧರಿಸಲು ಒಳ್ಳೆಯ ದಿನ.