ಕುಮಟಾ: ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರ ಪ್ರತಿಭೆ ಬೆಳೆಸುವ ನಿಟ್ಟಿನಲ್ಲಿ ಕುಮಟಾ ತಾಲೂಕಿನ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಕ್ರೀಡಾ ಕಲೋತ್ಸವ ನಡೆಯಿತು.
ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಕಾರ್ಯದರ್ಶಿಯವರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಜಿಯವರು ಶಾಲಾ ವಿದ್ಯಾರ್ಥಿಗಳ ಜೆತೆಗೆ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು ಜಗದ್ಗುರು ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಸ್ಮರಣೆಯನ್ನು ಪ್ರತೀ ವರ್ಷ ಮಾಡುವ ನಿಟ್ಟಿನಲ್ಲಿ ಇಂತಹ ಕಲೋತ್ಸವ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದರು.
ಒಂದೆಡೆ ಶಿಕ್ಷಣ ಆದರೆ ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮ ಸಹಕಾರಿ ಎಂದರು. ಕಾರ್ಯ ಒತ್ತಡದಲ್ಲಿ ಕೆಲ ವರ್ಷ ಹಿಂದುಳಿದಿದ್ದ ಇಂತಹ ಕಲೋತ್ಸವವನ್ನು ಮತ್ತೆ ಸಂಘಟಿಸುವಲ್ಲಿ ಸಂತಸವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎಂ.ಟಿ ಗೌಡ, ಶಿವಮೊಗ್ಗಾದ ಬಿಜಿಎಸ್ ಸಂಸ್ಥೆಯ ಪ್ರಾಂಶುಪಾಲರಾದ ಡಾ ಗುರುರಾಜ, ನಿಕಟಪೂರ್ವ ಪ್ರಾಂಶುಪಾಲರಾದ ಎಸ್ ಎನ್ ಭಟ್ಟ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಹಾಜರಿದ್ದರು.
ಮಕ್ಕಳು ವಿವಿಧ ರೀತಿಯ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಕಲೋತ್ಸವ ಯಶಸ್ವಿಸಿಗೊಳಿಸಿದರು.