ಗೋಕರ್ಣ- ಶ್ರೀ ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ನ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ವಿದ್ಯಾರ್ಥಿಗಳನ್ನು ಹೆಚ್ಚು ಅಂಕ ಗಳಿಸುವಂತೆ ಹುರಿದುಂಬಿಸುವ ಹಾಗೂ ಸಾಧನೆಗೈದ ಪ್ರತಿಭೆಗಳನ್ನು ಇನ್ನೂ ಹೆಚ್ಚಿನ ಸಾಧನೆಗೈಯುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕುಮಟಾ-ಹೊನ್ನಾವರ ಭಾಗದ ಎಲ್ಲಾ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸಾಧಕರಿಂದ ಸ್ಫೂರ್ತಿಗೊಂಡು ತಾವೂ ಕೂಡಾ ಸಾಧನೆ ಮಾಡಬೇಕೆಂಬ ನಿರ್ದಿಷ್ಟ ಗುರಿಯೊಂದಿಗೆ ಪ್ರಯತ್ನಶೀಲರಾಗಬೇಕು. ಶಿಕ್ಷಣದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರು ಕೂಡಾ ಪ್ರಗತಿ ಹೊಂದುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸುವ ಪ್ರಯತ್ನ ಮುಂದುವರಿಯುತ್ತಿದೆ. ಇದೀಗ ಸುಶಿಕ್ಷಿತರು ಉದ್ಯೋಗಕ್ಕಾಗಿ ಪರದಾಡುತ್ತಿದ್ದು ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ. ಫೆಬ್ರವರಿ 3 ರಂದು ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಬೃಹತ್ ಉದ್ಯೋಗಮೇಳ ಜರುಗುತ್ತಿದ್ದು ಈ ಬಗ್ಗೆ ಇತರರಿಗೂ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಹೇಳಿದರು ಹಾಗೂ ಈ ಶಾಲೆಯ ಅಭಿವೃದ್ಧಿಗೆ ತಮ್ಮಿಂದಾದ ಕೊಡುಗೆ ನೀಡುವುದಾಗಿ ನುಡಿದರು. ಗೋಕರ್ಣವು ಪುರಾಣ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಇದರ ಅಭಿವೃದ್ಧಿಗಾಗಿ ನಾವೆಲ್ಲ ಸಂಘಟಿತರಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

RELATED ARTICLES  ಒಂದೂವರೆ ವರ್ಷ ಬಂದ್ ಆಗಲಿದೆಯೇ ಕುಮಟಾ- ಶಿರಸಿ ರಸ್ತೆ ? ಪರ್ಯಾಯ ಮಾರ್ಗದ ಬಗ್ಗೆ ನಡೆದಿದೆ ಚಿಂತನೆ!

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಥಮಿಕ ಆರೋಗ್ಯಕೇಂದ್ರ ಗೋಕರ್ಣದ ವೈದ್ಯಾಧಿಕಾರಿಗಳಾದ ಡಾ|| ಜಗದೀಶ ನಾಯ್ಕ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆ ಅವರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೋಕರ್ಣವು ವಿಶ್ವ ವಿಖ್ಯಾತ ಪ್ರವಾಸಿ ತಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ಇಂತಹ ಕ್ಷೇತ್ರವು ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಅನೈರ್ಮಲ್ಯತೆಗೆ ಕುಖ್ಯಾತಿಯಾಗಿದೆ. ರಸ್ತೆ, ಕುಡಿಯುವ ನೀರು, ಕಸ ವಿಲೇವಾರಿ ಇಂತಹ ಸಮಸ್ಯೆಗಳು ಹಾಗೇ ಇವೆ. ಅಲ್ಲದೇ ಗೋಕರ್ಣದ ಪ್ರಾಥಮಿಕ ಆರೋಗ್ಯಕೇಂದ್ರ ಶಿಥಿಲಗೊಂಡಿದ್ದು ಯಾವುದೇ ಕನಿಷ್ಠ ಸೌಕರ್ಯಗಳನ್ನು ಕೂಡಾ ಹೊಂದಿರದೆ ಬಡ ರೋಗಿಗಳು ಪರದಾಡುವಂತಾಗಿದೆ. ಗೋಕರ್ಣದ ಅಭಿವೃದ್ಧಿಯಲ್ಲಿ ಯಾಕಿಷ್ಟು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಗೋಕರ್ಣವು ಅಭೀವೃದ್ಧಿ ಹೊಂದಲಿ ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾದ ಡಾ|| ಎಸ್. ವಿ.ಜಠಾರ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆ ಅವರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಇಡೀ ಉತ್ತರಕನ್ನಡ ಜಿಲ್ಲೆಯಲ್ಲೂ ಮನೆಮಾತಾಗಿದ್ದಾರೆ. ಸಮಾಜವನ್ನು ಪರಿವರ್ತಿಸುವ ಅದ್ಭುತವಾದ ಶಕ್ತಿ ಅವರಲ್ಲಿದ್ದು ಮುಂದಿನ ದಿನಗಳಲ್ಲಿ ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ. ಎಸ್.ಪಿ. ಮಂಡಳಿಯ ಅಧ್ಯಕ್ಷರಾದ ಡಾ|| ವಿನಾಯಕ ಆರ್. ಮಲ್ಲನ್. ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆ ಅವರ ಕಾರ್ಯವನ್ನು ಶ್ಲಾಘಿಸಿ ಈ ಸಂಸ್ಥೆಯೊಂದಿಗಿನ ಅವರ ಬಾಂಧವ್ಯ ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರಿಯಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.

RELATED ARTICLES  ಸಮುದ್ರದಲ್ಲಿ ಸಿಕ್ತು ಚಿನ್ನದ ಮೂಗುತಿಯ ದುರ್ಗಾದೇವಿ ವಿಗ್ರಹ

ಇದೇ ವೇದಿಕೆಯಲ್ಲಿ ಎಲ್ಲಾ ಶಿಕ್ಷಕರ ಪರವಾಗಿ ಮುಖ್ಯಾಧ್ಯಾಪಕರಾದ ಸಿ.ಜಿ.ನಾಯಕ ದೊರೆ, ಪ್ರಾಚಾರ್ಯರಾದ ಎಸ್. ಸಿ. ನಾಯಕ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ|| ವಿ. ಆರ್. ಮಲ್ಲನ್ ಅವರನ್ನೂ ಸನ್ಮಾನಿಸುವುದರೊಂದಿಗೆ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ಭಾರ್ಗವ ಜಿ. ಭಟ್ ಹಿರೇ, ಚಿಂತಾಮಣಿ ಜಿ. ಭಟ್, ಕೃಷ್ಣಮೂರ್ತಿ ಮಯ್ಯರ್, ಪಿಯುಸಿ ವಿದ್ಯಾರ್ಥಿಗಳಾದ ದೀಪ್ತಿ ಡಿ. ಪ್ರಭು, ಸಹನಾ ಮಿರಾಶಿ ಇವರುಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಹಾಗೂ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ನ ಅಡಿಯಲ್ಲಿ ಉತ್ತೀರ್ಣರಾದ 100 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸನ್ಮಾನಿತರ ಪರವಾಗಿ ಮುಖ್ಯಾಧ್ಯಾಪಕರಾದ ಸಿ.ಜಿ.ನಾಯಕ ದೊರೆ, ಪ್ರಾಚಾರ್ಯರಾದ ಎಸ್. ಸಿ. ನಾಯಕ ಮಾತನಾಡಿದರು. ಪುರಸ್ಕøತರ ಪರವಾಗಿ ಭಾರ್ಗವ ಜಿ. ಭಟ್ ಹಿರೇ ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಉಪಾಧ್ಯಕ್ಷರಾದ ರಮೇಶ ಪ್ರಸಾದ, ತಾ.ಪಂ. ಸದಸ್ಯ ಮಹೇಶ ಶೆಟ್ಟಿ, ಅರುಣ ಕವರಿ ತೊರ್ಕೆ, ವೆಂಕಟ್ರಮಣ ಕವರಿ, ಪ್ರಶಾಂತ ಗಾಂವಕರ, ಸದಾನಂದ ಹೊಸ್ಕಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.