ಮೈಸೂರು: ಮಹದಾಯಿ ನದಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿರುವಂತೆಯೇ ಇತ್ತ ಶಿವಮೊಗ್ಗ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ಬಂದ್ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿಗದ್ದು, ಬಂದ್ ಹೆಸರಿನಲ್ಲಿ ಮೈಸೂರಿನ ಪರಂಪರೆ ಹಾಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರು, ಸರ್ಕಾರಿ ಬಸ್ ಸೇವೆ ಸ್ಥಗಿತ ಕುರಿತಂತೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಮಾತನಾಡಿಸಿದ ಪ್ರತಾಪ್, ಬಂದ್ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಹೇಳಿದರು.
ಅತ್ತ ಪ್ರತಾಪ್ ನಿಲ್ದಾಣದಿಂದ ತೆರಳುತ್ತಿದ್ದಂತೆಯೇ ಇತ್ತ ನಿಲ್ದಾಣಕ್ಕೆ ಆಗಮಿಸಿದ ಕನ್ನಡಪರ ಹೋರಾಟಗಾರರು ನಿಲ್ದಾಣದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೆ ಮತ್ತೆ ಅಂಗಡಿ ತೆರೆಯದಂತೆ ಎಚ್ಚರಿಕೆ ನೀಡಿದರು.

RELATED ARTICLES  ಮ್ಯಾಟ್ ಕಬಡ್ಡಿ ಜಡ್ಡಿಗದ್ದೆ ಬಾಯ್ಸ್ ತಂಡ ಪ್ರಥಮ

ಇತ್ತ ಉಡುಪಿಯಲ್ಲಿಯೂ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಹದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದರೂ ಕೂಡಾ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬಂದ್ ವಿಚಾರವಾಗಿ ಯಾವ ಸಂಘಟನೆಗಳೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದರೆ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಣೆ ಮಾಡಿವೆ ಎನ್ನಲಾಗಿದೆ.

RELATED ARTICLES  ಪರೇಶ ಮೇಸ್ತಾ ಸಾವಿನ ಪ್ರಕರಣ ಸಿಬಿಐ ತನಿಖೆಗೆ! ನ್ಯಾಯದ ನಿರೀಕ್ಷೆಯಲ್ಲಿ ಕುಟುಂಬ

ಅಂತೆಯೇ ಶಿವಮೊಗ್ಗದಲ್ಲಿ ಕರ್ನಾಟಕದಲ್ಲಿ ಯಾವುದೇ ಬೆಂಬಲ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ತಿಳಿಸಿದ್ದು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಬಸ್ ಸಂಚಾರ ಕೂಡ ಇರಲಿದೆ. ಆಟೋ, ಬಸ್, ಕೆಎಸ್ ಆರ್ ಟಿಸಿ ಬಸ್ ಸಂಚರಿಸಲಿದೆ ಎಂದು ಹೇಳಿದರು. ಇದಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಬಸ್ ಸಂಚಾರ ಮುಂದುವರಿದಿದೆ. ಮಕ್ಕಳು ಶಾಲೆ, ಕಾಲೇಜಿಗೆ ಹೋಗುತ್ತಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳು, ಗ್ರಾಮೀಣ ಭಾಗಕ್ಕೆ ಬಸ್ ಗಳು ಸಂಚಾರ ಮಾಡುತ್ತಿವೆ. ಹುಬ್ಬಳ್ಳಿ ಕಡೆಗೆ ಹೋಗುವ ಬೆಳಗಿನ ಬಸ್ ಗಳನ್ನು ಬಿಡಲಾಗಿದೆ. ಮುಂದಿನ ಪರಿಸ್ಥಿತಿ ಅವಲೋಕಿಸಿ ಬಸ್ ಸೇವೆ ಮುಂದುವರೆಸುವ ಕುರಿತು ನಿರ್ಧರಿಸುತ್ತೇವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಎಂದಿನಂತೆ ಇಲ್ಲ.