ಕುಮಟಾ:- ಕುಮಟಾ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದಂತೆ ಇಲ್ಲಿನ ಮಣಕಿ ಮೈದಾನದಲ್ಲಿ ಕಲಾಗಂಗೋತ್ರಿ-ಕುಮಟಾ ಆಶ್ರಯದಲ್ಲಿ ಏರ್ಪಡಿಸಿದ ಪೆರ್ಡೂರು ಮೇಳದ ಯಕ್ಷಗಾನ ವೇದಿಕೆಯಲ್ಲಿ ಯಕ್ಷಗಾನ ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಂಘಟನಾಕಾರರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ರಾಜ್ಯಯುವ ಪ್ರಶಸ್ತಿ ಪುರಸ್ಕøತ ಸಾಮಾಜಿಕ ಕಾರ್ಯಕರ್ತ, ಕಲಾಗಂಗೋತ್ರಿ ಸಂಸ್ಥಾಪಕ ದಿ|| ದುರ್ಗಾದಾಸ ಗಂಗೊಳ್ಳಿಯವರ ಸ್ಮರಣಾರ್ಥ ಅಶಕ್ತ ಕಲಾವಿದರಿಗೆ ನೀಡಲಾಗುವ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಯಕ್ಷಗಾನ ಹಿರಿಯ ಭಾಗವತರಾದ ಶ್ರೀ ಕೃಷ್ಣ ಮಾಣಿ ಆಗೇರ, ಮಾಸ್ಕೇರಿ ಇವರಿಗೆ ಹಾಗೂ “ಕಲಾಗಂಗೋತ್ರಿ ಪ್ರಶಸ್ತಿ”ಯನ್ನು ಹಿರಿಯ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಕೃಷ್ಣ ಯಾಜಿ ಬಳ್ಕೂರು ಇವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನದ ಹಿರಿಯ ಸಂಘಟನಾಕಾರ ಶ್ರೀ ಅಶೋಕ ಭಟ್ಟ ಕತಗಾಲ ಇವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಪೆರ್ಡೂರು ಮೇಳದ ಯಕ್ಷಗಾನ ಸಂಘಟಿಸುತ್ತಾ ಬಂದಿರುವ ಕಲಾಗಂಗೋತ್ರಿಯ ಅಧ್ಯಕ್ಷ ‘ಯಕ್ಷಸಿರಿ’ ಖ್ಯಾತಿಯ ಶ್ರೀಧರ ನಾಯ್ಕ ಕುಮಟಾ ಇವರಿಗೆ ಪೆರ್ಡೂರು ಮೇಳದ ವತಿಯಿಂದ ಮೇಳದ ಯಜಮಾನರಾದ ಶ್ರೀ ಕರುಣಾಕರ ಶೆಟ್ಟಿ ಹಾಗೂ ಮೇಳದ ಎಲ್ಲಾ ಕಲಾವಿದರು ಸೇರಿ ಸನ್ಮಾನಿಸಿದರು.

ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಆರ್.ಟಿ. ಹೆಗಡೆಯವರು ಮಾತನಾಡಿ ಯಕ್ಷಗಾನ ಕಲೆಯು ಪುರಾಣ ಕಥಾನಕಗಳ ಪ್ರದರ್ಶನದ ಮೂಲಕ ಜೀವನದ ಮೌಲ್ಯವನ್ನು ಬೋಧಿಸುತ್ತಿರುವ ಶ್ರೇಷ್ಠ ಕಲೆಯಾಗಿದೆ. ಉತ್ತಮ ಗುಣ-ನಡತೆಯನ್ನು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಉತ್ತಮ ಸಮಾಜದ ನಿರ್ಮಾಣ ಮಾಡಿಕೊಳ್ಳಬೇಕಾದ ಅಗತ್ಯವಿದೆ ಹಾಗೂ ಕಲಾಗಂಗೋತ್ರಿ ನಿಸ್ವಾರ್ಥದಿಂದ ಕಲಾಸೇವೆ ಗೈಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಬಿಜೆಪಿ ಸಮೀಕ್ಷೆಯಲ್ಲಿ ರೂಪಾಲಿಯೇ ಮುಂದೆ.

ಅಧ್ಯಕ್ಷತೆ ವಹಿಸಿದ್ದ ಕಲಾಗಂಗೋತ್ರಿಯ ಅಧ್ಯಕ್ಷ ಶ್ರೀಧರ ನಾಯ್ಕ ಇವರು ಪೆರ್ಡೂರು ಮೇಳದ ವತಿಯಿಂದ ಸನ್ಮಾನ ಸ್ವೀಕರಿಸಿ ಯಕ್ಷಗಾನ ಸಂಘಟನೆಯ ಹಾದಿಯಲ್ಲಿ ಸಹಕರಿಸಿದ ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ, ಕಲಾವಿದ ರಮೇಶ ಭಂಡಾರಿ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಕಲಾಗಂಗೋತ್ರಿ ಸದಸ್ಯರನ್ನು ಹಾಗೂ ಸರ್ವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

“ಕಲಾಗಂಗೋತ್ರಿ ಪ್ರಶಸ್ತಿ” ಸ್ವೀಕರಿಸಿ ಖ್ಯಾತ ಹಿರಿಯ ಕಲಾವಿದರಾದ ಶ್ರೀ ಕೃಷ್ಣ ಯಾಜಿಯವರು ಮಾತನಾಡಿ ತನ್ನ 44 ವರ್ಷಗಳ ಯಕ್ಷ ಬದುಕಿನಲ್ಲಿ ಸಾಲಿಗ್ರಾಮ ಮೇಳದ ಕಲಾವಿದನಾದ ನಾನು ಪ್ರಥಮ ಬಾರಿಗೆ ಪೆರ್ಡೂರು ಮೇಳದ ವೇದಿಕೆಯೇರಿ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, “ರಾಜಕೀಯ ಯಾವುದೇ ಅಧಿಕಾರವಿಲ್ಲದೆಯೂ ಸಮಾಜ ಸೇವೆ ಸಾಧ್ಯ ಎಂಬುದಕ್ಕೆ ದಿ|| ದುರ್ಗಾದಾಸ ಗಂಗೊಳ್ಳಿಯವರೇ ಸಾಕ್ಷಿ” ಕಲಾವಿದರ ಅಳಲು ಸರ್ಕಾರಕ್ಕೆ ತಲುಪುವಂತಾದರೆ ಮಾತ್ರ ಕಲಾವಿದರ ಬಾಳು ಬೆಳಗಲು ಸಾಧ್ಯ ಎಂದರು. ತನ್ನ ಪರಮಾಪ್ತ ಎಂದರು. ಸನ್ಮಾನ ಸ್ವೀಕರಿಸಿ ಹಿರಿಯ ಸಂಘಟನಾಕಾರ ಅಶೋಕ ಭಟ್ಟ ಕತಗಾಲ ಅನಿಸಿಕೆ ವ್ಯಕ್ತ ಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವ ದಿಶೆಯಲ್ಲಿನ ಎಲ್ಲಾ ಪ್ರಯತ್ನಗಳಿಗೆ ಸದಾ ನನ್ನ ಸಹಕಾರ ಇದೆ ಎಂದರು. ಯುವ ಮುಖಂಡ, ಉದ್ದಿಮೆದಾರರಾದ ರವಿಕುಮಾರ ಶೆಟ್ಟಿಯವರು ಮಾತನಾಡಿ ಕಲಾವಿದರ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರ ಮೂಲಕ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಯುವ ಮುಖಂಡ ಸೂರಜ ನಾಯ್ಕ ಸೋನಿಯವರು ಮಾತನಾಡಿ ಯುವ ಸಂಘಟನೆಯ ಮೂಲಕ ಸಾಮಾಜಿಕ ಕಳಕಳಿಯಿಂದ ಹೋರಾಡಿದ ದಿ|| ದುರ್ಗಾದಾಸ ಗಂಗೊಳ್ಳಿಯವರ ತತ್ವ ಆದರ್ಶಗಳೇ ನನಗೆ ಪ್ರೇರಣೆ ಎಂದರು. ‘ಯಕ್ಷಸಿರಿ’ ಶ್ರೀಧರ ನಾಯ್ಕರಿಗೆ ಸನ್ಮಾನಿಸಿ ಮಾತನಾಡಿದ ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಮಾತನಾಡಿ ಯಕ್ಷಗಾನದ ಯಶಸ್ಸಿಗೆ ಸಂಘಟಕರೇ ಕಾರಣ. ಕಳೆದ 26 ವರ್ಷಗಳಿಂದ ತಮ್ಮ ಮೇಳದ ಯಕ್ಷಗಾನ ಸಂಘಟಿಸುತ್ತಾ ಬಂದಿರುವುದಕ್ಕೆ ಶ್ರೀಧರ ನಾಯ್ಕರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಉದ್ದಿಮೆದಾರರಾದ ಶ್ರೀ ಗಜಾನನ ಶಾಸ್ತ್ರಿ ಬರಗದ್ದೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ಶ್ರಾವಣಮಾಸದಲ್ಲಿ ಧಾರೇಶ್ವರದ ಶ್ರೀಧಾರಾನಾಥ ದೇವಸ್ಥಾನದಲ್ಲಿ ಈ ನಿಯಮ

ಕಲಾಗಂಗೋತ್ರಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ. ಪೈ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ ಭಟ್ಟ ಬಗ್ಗೋಣ ವಂದಿಸಿದರು. ಎಸ್.ಟಿ. ಭಟ್ಟ ನಿರೂಪಿಸಿದರು. ಎಂ.ಟಿ. ನಾಯ್ಕ, ಗಣೇಶ ಪಟಗಾರ, ವಸಂತ ಪಂಡಿತ ಹಾಗೂ ಖ್ಯಾತ ಕಲಾವಿದ ಥಂಡಿ ಶ್ರೀಪಾದ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಕಲಾಗಂಗೋತ್ರಿಯ ಎಲ್ಲಾ ಸದಸ್ಯರು ಸಹಕರಿಸಿದರು. ನಂತರ ಪೆರ್ಡೂರು ಮೇಳದಿಂದ “ಅಹ್ಮಂ ಬ್ರಹ್ಮಾಸ್ಮಿ” ಯಕ್ಷಗಾನ ಜರುಗಿತು.