ಕಾರವಾರ: ಮಾನವ ತನ್ನ ತಾಯಿಯ ಗರ್ಭದಲ್ಲಿ ಭ್ರೂಣವಾಗಿ ಹುಟ್ಟಿದಾಗಿನಿಂದ ಸಾಯುವರೆಗೂ ಮಾನವ ಹಕ್ಕುಗಳನ್ನು ಹೊಂದಿರುತ್ತಾನೆ. ಮಾನವ ಹಕ್ಕು ಎಂದರೆ ಯಾವುದೇ ವ್ಯಕ್ತಿಯ ಜೀವಕ್ಕೆ, ಸ್ವಾತಂತ್ರ್ಯಕ್ಕೆ ಮತ್ತು ಮರ್ಯಾದೆಗೆ ದಕ್ಕೆ ಉಂಟಾದಾಗ ಧ್ವನಿ ಎತ್ತುವಂತಾಗಿರುತ್ತದೆ ಎಂದು ಪ್ರಧಾನ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಠ್ಠಲ ಎಸ್. ಧಾರವಾಡಕರ ಹೇಳಿದರು.

ಅವರು ಗುರುವಾರ ನಗರದ ಜಿಲ್ಲಾ ರಂಗ ಮಂದಿರದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

RELATED ARTICLES  ಚೆಸ್ ಪಂದ್ಯಾವಳಿಯಲ್ಲಿ ಎಚ್. ಎ. ಸುಜಿತ್ ಸಾಧನೆ

ಭಾರತ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳು ಮಾನವ ಹಕ್ಕುಗಳು ಪ್ರತಿರೂಪವಾಗಿವೆ. ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟಿನಿಂದ ಸಾಯುವರೆಗೂ ಮಾನವ ಹಕ್ಕುಗಳಿರತ್ತವೆ. ಭ್ರೂಣ ಹತ್ಯೆ ಎಂಬ ಮಾತನ್ನು ಕೇಳಿದಾಗ ಗರ್ಭದಲ್ಲಿರುವಾಗಲೇ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂಬುದು ತಿಳಿದು ಬರುತ್ತದೆ. ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿರುತ್ತದೆ ಎಂದು ಅವರು ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಮಾತನಾಡಿ ಸಮಾಜದಲ್ಲಿ ಹೆಣ್ಣಾಗಿರಲಿ ಅಥವಾ ಗಂಡಾಗಿರಲಿ ಗೌರವಯುತವಾಗಿ ಬದುಕುವ ಹಕ್ಕು ಹೊಂದಿರುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬರುತ್ತವೆ. ಮಹಿಳೆಯನ್ನು ಗುಲಾಮಳಂತೆ ಕಾಣಲಾಗುತ್ತದೆ. ನಮ್ಮ ಭಾರತ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿರುವ ಸಮಾನತೆ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಇಷ್ಟವಾದ ಧರ್ಮ ಆಚರಿಸುವ ಸ್ವಾತಂತ್ರ್ಯ ಹಕ್ಕುಗಳೆಲ್ಲ ಮಾನವ ಹಕ್ಕುಗಳಾಗಿವೆ. ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ಗೌರವಯುತವಾಗಿ ಬದುಕಬೇಕು, ಒಟ್ಟಾರೆಯಾಗಿ ಮಾನವರ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

RELATED ARTICLES  ವೃದ್ಧೆಯ ಹೊಟ್ಟೆಯಲ್ಲಿದ್ದ 10 ಕೆ.ಜಿ ಗಡ್ಡೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್. ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಹೆಚ್. ಪ್ರಸನ್ನ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.