ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ 69 ನೆಯ ಗಣರಾಜ್ಯೋತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಮುಖ್ಯಾಧ್ಯಾಪಕ ಎನ್.ಆರ್.ಗಜು ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನ ಮಹತ್ವದೊಂದಿಗೆ ಸಾಮರಸ್ಯದ ಜೀವನ ಹೆಗಲ ಮೇಲಿನ ಜವಾಬ್ದಾರಿ ಆಗಿದೆ ಅಲ್ಲದೇ “ಸರ್ವೇಜನಾಃ ಸುಖಿನೋ ಭವಂತು” ಮತ್ತು ‘ವಸುದೈವ ಕುಟುಬಕಂ’ ಎಂಬ ಭಾರತೀಯ ದಾರ್ಶನಿಕರ ಸಂದೇಶ ಇಂದಿಗೆ ಅತ್ಯಂತ ಮಹತ್ವ ಪಡೆದಿದೆ ಎಂದರು.
ಸಹಬಾಳ್ವೆಗೆ ಹೆಸರಾದ ಈ ರಾಷ್ಟ್ರ ವಿಶ್ವಕ್ಕೆ ಮಾದರಿಯಾಗಿರಬೇಕಾದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶತ್ವದ ಮನವರಿಕೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿಶಿಷ್ಠವಾಗಿ ಗುರುತಿಸಿಕೊಂಡ ರಕ್ಷಿತಾ ಪಟಗಾರ, ಐಶ್ವರ್ಯಾ ಶಾನಭಾಗ, ಹೇಮಾ ಪಟಗಾರ, ಶ್ರೀಲಕ್ಮೀ ಭಟ್ಟ ಅವರನ್ನು ಅಭಿನಂದಿಸಿದರು. ಕನ್ನಡ ನಿಧಿ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕ ಸುರೇಶ ಪೈ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಶಿಕ್ಷಕ ಅನಿಲ್ ರೊಡ್ರಗೀಸ್ ಅವರಿಗೆ ಅಭಿನಂದಿಸಲಾಯಿತು.
ದೈಹಿಕ ಶಿಕ್ಷಕ ಎಲ್.ಅನ್.ಅಂಬಿಗ, ಕ್ರಾಫ್ಟ್ ಶಿಕ್ಷಕಿ ಪವಿತ್ರಾ ಬಿ. ಪ್ರಶಾಂತ ಗಾವಡಿ ಅವರು ನೆರವಾದರು. ಪ್ರಾರಂಭದಲ್ಲಿ ವಿಶ್ವಾಸ್ ಪೈ ಗೌರವ ರಕ್ಷೆ ಪ್ರದರ್ಶಿಸಿದರು. ರಾಷ್ಟ್ರ ಗೀತೆ ಹಾಗೂ ದೇಶಾಭಿಮಾನ ಗೀತೆಗಳಿಂದ ರಾಜ್ಯೋತ್ಸವ ಸಂಭ್ರಮದ ಮೆರಗು ಧ್ವನಿಸಿತ್ತು.