ಕಾರವಾರ: ಗಣರಾಜ್ಯೋತ್ಸವದ ಅಂಗವಾಗಿ ಇಂದು ನಗರದ ಮಾಲಾದೇವಿ ಮೈದಾನದಿಂದ ಪೊಲೀಸ್ ಪರೇಡ್ ಮೈದಾನದ ವರೆಗೆ ಒಂದು ಕಿ.ಮೀ. ಉದ್ದದ ಬೃಹತ್ ರಾಷ್ಟ್ರ ಧ್ವಜವನ್ನು ಮೆರವಣಿಗೆ ನಡೆಸಲಾಯಿತು.
ಎನ್ಎಸ್ ಯುಐ ರಾಜ್ಯ ಕಾರ್ಯದರ್ಶಿ ಸಿದ್ಧಾರ್ಥ ನಾಯಕ ಅವರ ನೇತೃತ್ವದಲ್ಲಿ ಹಮ್ನಿಕೊಂಡಿದ್ದ ಈ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಕರಾವಳಿಯ ಭಾಗದಲ್ಲಿ ಹಮ್ಮಿಕೊಂಡ ಅತೀ ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ಇದಾಗಿದೆ. ಸಾರ್ವಜನಿಕರಲ್ಲಿ ದೇಶಪ್ರೇಮ ಉತ್ತೇಜಿಸಲು ಈ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು.
ಕುಮಟಾ : ಇಂದು ಗಣರಾಜ್ಯೋತ್ಸವ ಅಂಗವಾಗಿ ಕುಮಟಾದ ಮಣಕಿ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಲಕ್ಷ್ಮಿ ಪ್ರಿಯ ,ಸಾಹಿತಿಗಳಾದ ಬಿ.ಎ ಸನದಿ,ಪುರಸಭಾ ಅಧ್ಯಕ್ಷ ಮಧುಸೂದನ್ ಶೇಟ್, ಮತ್ತಿತರು ಉಪಸ್ಥಿತರಿದ್ದರು .ಕಾರ್ಯಕ್ರಮದಲ್ಲಿ ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು . ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ಅಂಕೋಲಾ : ತಾಲೂಕಿನಲ್ಲಿ 69 ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಿದ್ದು ಸಮಾಜಮಂದಿರದ ಐತಿಹಾಸಿಕ ಧ್ವ್ವಜಾರೋಹಣವನ್ನು ಪುರಸಭೆಯ ಅಧ್ಯಕ್ಷೆ ಅಂಜಲಿ ಐಗಳ ನೆರವೇರಿಸಿದರೆ ಸ್ವಾತಂತ್ರ್ಯ ಸಂಗ್ರಾಮ ಭವನದ ಧ್ವಜಸ್ಥಂಭದಲ್ಲಿ ತಹಶೀಲ್ದಾರ್ ವಿವೇಕ ಶೇಣ್ವಿ ಸಾರ್ವಜನಿಕ ಧ್ವಜಾರೋಹಣವನ್ನು ನೆರವೇರಿಸಿದರು.
ಇದಕ್ಕೂ ಮೊದಲು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ವಿವಿಧ ಶಾಲಾ ಮಕ್ಕಳ ವೈವಿಧ್ಯಮಯ ರೂಪಕಗಳೊಂದಿಗೆ ನಡೆದ ಚಿತ್ತಾಕರ್ಷಕ ಪಥಸಂಚಲನದೊಂದಿಗೆ ನಗರದ ಕಿತ್ತೂರು ಚೆನ್ನಮ್ಮಾ ರಸ್ತೆಯ ಮೂಲಕ ಹಾಯ್ದು, ಮುಖ್ಯರಸ್ತೆ, ಕಾರವಾರ ರಸ್ತೆ ಮೂಲಕ ಮರಳಿ ಸಮಾಜ ಮಂದಿರಕ್ಕೆ ಆಗಮಿಸಿತು.
ಪಥಸಂಚಲನದಲ್ಲಿ ವಿವಿಧ ಶಾಲಾ ಮಕ್ಕಳು ವೈವಿಧ್ಯಮಯ ರೂಪಕ ಧರಿಸಿ ಗಮನ ಸೆಳೆದರು. ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರು, ನಾಡು ನುಡಿಗೆ ಸೇವೆ ಸಲ್ಲಿಸಿದವರ ರೂಪಕ, ವಿವಿಧ ರಾಜ್ಯಗಳ ವೈಶಿಷ್ಠ್ಯತೆ ಸಾರುವ ರೂಪಕಗಳು, ನೃತ್ಯ ತಂಡಗಳು, ಎನ್.ಸಿಸಿ, ಸ್ಕೌಟ್, ಗೃಹರಕ್ಷಕದಳ, ಭಾರತ ಮಾತೆ, ಅಂಬೇಡ್ಕರ್, ವೈವಿಧ್ಯಮಯ ಸಂಸ್ಕೃತಿ, ಕಲೆ ಬಿಂಬಿಸುವ ಪಾತ್ರಧಾರಿಗಳು ಮೆರವಣಿಗೆಯುದ್ದಕ್ಕೂ ಮನಗೆದ್ದರು.
ಕಾರವಾರ: ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡ್‍ನಲ್ಲಿ ಭಾಗವಹಿಸಿದ್ದ ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್‍ನ 8ನೇ ನೇವಲ್ ಎನ್.ಸಿ.ಸಿ.ಬಟಾಲಿಯನ್ ಪ್ರಥಮ ಸ್ಥಾನ ಪಡೆದುಕೊಂಡಿತು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ತಂಡ ದ್ವಿತೀಯ, ಬಾಡ ಶಿವಾಜಿ ಬಾಲಕಿಯರ ಪ್ರೌಢಶಾಲೆಯ ತುಕಡಿ ತೃತೀಯ ಸ್ಥಾನ ಪಡೆದುಕೊಂಡಿತು.
ನವಕರ್ನಾಟಕ ವಿಷನ್ 2025 ಚಿತ್ರ ಕಲಾ ಸ್ಪರ್ಧೆಯ ವಿಜೇತರಾದ ಅಂಕೋಲಾ ತಾಲೂಕಿನ ಅಲಗೇರಿ ಸರಕಾರಿ ಪ್ರೌಡಶಾಲೆಯ ಪ್ರಜ್ವಲ್ ಗೋವಿಂದ ಆಗೇರ, ಹೊನ್ನಾವರ ತಾಲೂಕಿನ ನವಿಲಗೋಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪವನ ದೇವರು ನಾಯ್ಕ, ಯಲ್ಲಾಪುರ ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಘಾ ಯು.ಭಂಡಾರಿ, ಸಿದ್ದಾಪುರ ತಾಲೂಕಿನ ಹೊಸುರು ಬಕೇಶ್ವರ ಪೌಢಶಾಲೆಯ ಎಸ್.ಪಿ.ಶರತ್ ಕುಮಾರ ಅವರಿಗೆ ಚಿತ್ರಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಆರು ಮಂದಿ ಸರಕಾರಿ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸಂಗೀತಾ ಗಜಾನನ ಭಟ್, ಹಳಿಯಾಳ ತಾಲೂಕಿನ ತೇರಗಾಂವ ಪಶುಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ ಹೆಗಡೆ, ಭಟ್ಕಳ ವಲಯ ಅರಣ್ಯಾಧಿಕಾರಿ ರವಿ ಎಸ್. ಗೋಕರ್ಣ ಗ್ರಾಮ ಲೆಕ್ಕಾಧಿಕಾರಿ ಸಂದೇಶ ಎಸ್. ನಾಯ್ಕ, ಕಾನಗೋಡ ಗ್ರಾಮ ಪಂಚಾಯತ್ ಪಿ.ಡಿ.ಒ ವಿದ್ಯಾ ಎಸ್. ದೇಸಾಯಿ ಜಿಲ್ಲಾಧಿಕಾರಿ ಕಚೇರಿ ಜವಾನ ಗೋವಿಂದ ಹನುಮಂತ ನಾಯ್ಕ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪ್ರಶಸ್ತಿ ಪ್ರಧಾನ ಮಾಡಿದರು.
ಹೊನ್ನಾವರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಸಾರ್ವತ್ರಿಕ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯ್ಷರಾಗಿರುವ ತಾಲೂಕ ದಂಡಾಧಿಕಾರಿ V.R ಗೌಡರವರು ಧ್ವಜಾರೋಹಣ ನೆರವೇರಿಸಿದರು. ಮಾನ್ಯ ತಶಿಲ್ದಾರರು ತೆರೆದ ಜೀಪನಲ್ಲಿ ಪತ ಸಂಚಲನ ತಂಡಗಳ ವೀಕ್ಷಣೆ ಮಾಡಿದರು. ಪೊಲೀಸ್ ಇಲಾಖೆ, ಗೃಹ ರಕ್ಷಣಾ ಇಲಾಖೆ, ಸ್ಕೌಟ್ಸ್ ಗೈಡ್ಸ್, ಎನ್.ಸಿ.ಸಿ. ಕಾಲೇಜ್ ರೋವರ್ಸ್, ಕಾಲೇಜ್ ರೇಂಜರ್ಸ್ ಗಳಿಂದ ಆಕರ್ಷಣೀಯ ಪತ ಸಂಚಲನ ಮಾಡಲಾಯಿತು. ಪತ ಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ನಂತರದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಭಟ್ಕಳ: ಬೀನಾ ವೈದ್ಯ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 69ನೇ ಗಣರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶಾಸಕ ಮಂಕಾಳು ವೈದ್ಯ ಧ್ವಜಾರೋಹಣ ಮಾಡಿದರು. ಆಕರ್ಷಣೀಯ ಪರೇಡ್ ಮೂಲಕ ದ್ವಜಾರೋಹಣ ಮಾಡಿ ಎಲ್ಲರಿಗೂ ಶುಭಾಶಯ ತಿಳಿಸಿದರು.