ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಪ್ರತಿ ವರ್ಷದಂತೆ ಆಯೋಜಿಸುತ್ತಿರುವ ಶ್ರೀ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ದಿ: 27/01/2018 ರಿಂದ 31/01/2018 ರವರೆಗೆ 5 ದಿನಗಳ ಕಾಲ ಬಯಲು ರಂಗಮಂದಿರದಲ್ಲಿ ಗೋಷ್ಠಿ, ಸಮ್ಮಾನ, ಪ್ರಶಸ್ತಿ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವ ಸಾಂಸ್ಕೃತಿಕ ಜಾತ್ರೆ ಖ್ಯಾತ ಭರತನಾಟ್ಯ ಕಲಾವಿದರಾದ ಬೆಂಗಳೂರಿನ ಶ್ರೀ ಸತ್ಯನಾರಾಯಣ ರಾಜುರವರಿಂದ ಶುಭಾರಂಭಗೊಳ್ಳಲಿದೆ. ಶ್ರೀಯುತರು ಸಂಸ್ಕೃತಿ ಎನ್ನುವಂತಹ ಸಂಸ್ಥೆಯ ನಿರ್ದೇಶಕರಾಗಿದ್ದು ವಿವಿಧ ಆಯಾಮಗಳ ಪ್ರಸ್ತುತಿಯನ್ನು ಪ್ರಸ್ತುತಪಡಿಸಲಿದ್ದಾರೆ.

RELATED ARTICLES  ಮಿರ್ಜಾನ್ ಸಮೀಪ ಅಪಘಾತ : ಓರ್ವ ಸಾವು.

ತದನಂತರದಲ್ಲಿ ಗುಜರಾತ್ ರಾಜ್ಯದಿಂದ ಆಗಮಿಸಲಿರುವ ಸಪ್ತಕ್ ಜಾನಪದ ನೃತ್ಯ ತಂಡದ 15 ನುರಿತ ಕಲಾವಿದರಿಂದ ‘ರಾಸ್’ ಮತ್ತು ‘ಗರ್ಭ’ ಎಂಬ ವಿಶೇಷ ಪ್ರಸ್ತುತಿ ಪ್ರದರ್ಶಿಸಲಿದ್ದಾರೆ. ಅಂತೆಯೇ ಜಾನಪದ ತಳಹದಿಯಲ್ಲಿ ರೂಪಗೊಂಡಿರುವ ದಾಂಡಿಯಾರಾಸ್, ಹೂಡಾರಾಸ್, ಅತಂಗರಾಸ್ ಮತ್ತು ಮಾಂಡವಿರಾಸ್ ಪ್ರಸ್ತುತಿಗೊಳ್ಳಲಿದೆ. ಜಾನಪದ ಶೈಲಿಯಲ್ಲಿಯೇ ವೇಷಭೂಷಣಗಳನ್ನು ಅಳವಡಿಸಿಕೊಂಡು ಪ್ರದರ್ಶಿಸುವ ಈ ಖ್ಯಾತ ತಂಡ ದೇಶ ವಿದೇಶಗಳಲ್ಲಿ ಮಾನ್ಯತೆ ಪಡೆದಿದೆ. ಮೊದಲನೇ ದಿನದ ಕೊನೆಯ ಸಾಂಸ್ಕೃತಿಕ ಸಿಂಚನವನ್ನು ಬೆಂಗಳೂರಿನ ಓಂಕಾರ ಕ್ರಿಯೇಷನ್ಸ್ ಇದರ ನಿರ್ದೇಶಕಿಯಾದ ಶ್ರೀಮತಿ ಸುಮಾ ವಿಜಯ ಮತ್ತು ಇವರ ತಂಡದಿಂದ ‘ಸಪ್ತಸ್ವರ ಶಿವ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಶಿವನಿಂದ ಸ್ಪುರಣಗೊಂಡ ಸಪ್ತಸ್ವರಗಳು, ನಾದಲೀಲೆಯ ಕಿರಣಗಳು ಪ್ರತಿಯೊಂದು ಸ್ವರವೂ ಶಿವಲೀಲೆಯ ವರ್ಣನೆಯ ರಾಗಮಾಲಿಕಾ ಷಟ್ಪದದಲ್ಲಿ ಶಿವನ ವೈರಾಗ್ಯವನ್ನು ನೃತ್ಯರೂಪಕದಲ್ಲಿ ಪ್ರಸ್ತುತಪಡಿಸಲಿಕ್ಕಿದ್ದಾರೆ.

RELATED ARTICLES  ವಿದ್ಯಾರ್ಥಿಗಳು ಕಾಲೇಜಿಗೆ ತಂದಿದ್ದ ಮೊಬೈಲ್ ವಶಪಡಿಸಿಕೊಂಡ ಸಿಬ್ಬಂದಿ

ದೇಶದ ನಾನಾ ಭಾಗಗಳಿಂದ ಬಂದು ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಪ್ರದರ್ಶಿಸಲಿಕ್ಕಿರುವ ವೈವಿಧ್ಯಮಯ ಮತ್ತು ಸುಪ್ರಸಿದ್ಧವಾದ ನೃತ್ಯ ತಂಡಗಳನ್ನು ಮತ್ತು ಖ್ಯಾತ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಿ ಕಲಾಮನಸ್ಸುಗಳುಳ್ಳ ಎಲ್ಲಾ ಕಲಾಭಿಮಾನಿಗಳು ಕಲಾಪೋಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ನಾಟ್ಯೋತ್ಸವದ ಸಂಚಾಲಕರಾದ ಶ್ರೀ ಶಿವಾನಂದ ಹೆಗಡೆಯವರು ತಿಳಿಸಿದ್ದಾರೆ.