ಕಾರವಾರ: ಪರೇಶ್ ಮೇಸ್ತ ಸಾವಿನ ಪ್ರಕರಣದ ತನಿಖೆ ವಿಳಂಬವಾಗುತ್ತಿರುವ ಕುರಿತು ಕೇಂದ್ರ ಸಚಿವರನ್ನು ಪ್ರಶ್ನಿಸಬೇಕು ಹೊರತು ನನ್ನನ್ನಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ ದೇಶಪಾಂಡೆ ಮಾಧ್ಯಮದವರ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಉತ್ತರಿಸಿದರು.

ಸುದ್ದಿಗೊಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜನರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಪ್ರಸ್ತುತ ಪ್ರಕರಣದ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ತಮ್ಮನ್ನು ಪ್ರಶ್ನಿಸುವ ಬದಲು ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು. ಕೇಂದ್ರ ಸಚಿವರ ಮೂಲಕ ಪ್ರಧಾನಿಯನ್ನು ಪ್ರಶ್ನಿಸಬೇಕು ಎಂದು ಹೇಳಿದರು. ಸಿಬಿಐ ಗೆ ಪ್ರಕರಣ ವಹಿಸಿದ ನಂತರ ರಾಜ್ಯ ಸರ್ಕಾರದಿಂದ ಅದರ ಬೆನ್ನು ಬೀಳಲು ಸಾಧ್ಯವಿಲ್ಲ. ದೆಹಲಿಗೆ ತೆರಳುತ್ತಿರುವ ಕೇಂದ್ರ ಸಚಿವರು ಈ ಬಗ್ಗೆ ಜವಾಬ್ದಾರಿ ವಹಿಸಬೇಕು ಎಂದರು.

RELATED ARTICLES  ಸಿದ್ದಾಪುರದಲ್ಲಿ ಚಿಣ್ಣರನ್ನು ಕೈ ಬೀಸಿ ಕರೆಯುತ್ತಿದೆ ಪುಟ್ಟ ಉದ್ಯಾನ!

ಚುನಾವಣೆ ಸಮೀಪಿಸಿದಾಗ ಜವಾಬ್ದಾರಿ ಮೀರಿ ವರ್ತಿಸುವ ಜನಪ್ರತಿನಿಧಿಗಳಿಗೆ ಜನತೆ ಬಗ್ಗೆ ಕಾಳಜಿ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಯಾರೂ ಗಲಾಟೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡಬಾರದು. ಅಭಿವೃದ್ದಿ ವಿಷಯದಲ್ಲಿ ಕೈ ಜೋಡಿಸಬೇಕು. ಅನ್ಯಾಯವಾದಾಗ ಧ್ವನಿ ಎತ್ತಿ ಮಾತನಾಡಿ ನ್ಯಾಯ ಒದಗಿಸಿಕೊಡಬೇಕು ಎಂದರು. ನಿರ್ದಿಷ್ಟ ಸಮುದಾಯದ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ಕೈ ಬಿಡಬೇಕು ಎಂದು ರಾಜ್ಯ ಸರ್ಕಾರ ಪೊಲೀಸರಿಗೆ ಆದೇಶಿಸಿದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪೊಲೀಸರು ಪ್ರಕರಣ ದಾಖಸಿದ ನಂತರ ಸರ್ಕಾರದಿಂದಲೂ ಪ್ರಕರಣ ಕೈ ಬಿಡಲು ಸಾಧ್ಯವಿಲ್ಲ. ಪ್ರಕರಣ ಕೈ ಬಿಡುವಂತೆ ಜನರಿಂದ ಮನವಿ ಬಂದಾಗ ಅದನ್ನು ವಿವಿಧ ಹಂತಗಳಲ್ಲಿ ವಿಚಾರಣೆ ಮಾಡಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸುಳ್ಳು ಪ್ರಕರಣವಾದಲ್ಲಿ ನಂತರ ನ್ಯಾಯಾಲಯದ ಮೂಲಕ ಕೈ ಬಿಡಲಾಗುತ್ತದೆ ಎಂದರು.

RELATED ARTICLES  ಟೊಂಕ ಮೀನುಗಾರಿಕಾ ಬಂದರಿನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿದ ಸಿಪಿಐ ಶ್ರೀಧರ್ : ಸ್ಥಳೀಯರಿಂದ ಮೆಚ್ಚುಗೆ

ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಚುನಾವಣಾ ಆಯೋಗ ನಿರ್ದೇಶನ ಸರಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಗಾಗಲೇ ಹೊರಡಿಸಿದ ಆದೇಶವನ್ನು ರದ್ದು ಪಡಿಸುವ ವಿಶ್ವಾಸವಿದೆ ಎಂದರು.