ಕಾರವಾರ:ತಾಲೂಕಿನ ಅಮದಳ್ಳಿಯಲ್ಲಿ ಪ್ರಾರಂಭ ಗೊಂಡಿರುವ ಜಾನಪದ ಉತ್ಸವದ ಎರಡನೇ ದಿನದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಜಾನಪದ ಉತ್ಸವವು ಶ್ರಮದಿಂದ ಬಂದಿರುವುದು. ಬೆವರಿನ ಹನಿಯಲ್ಲಿ ಬೆಳೆದುಬಂದಂಥ ಈ ಉತ್ಸವಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಕರಾವಳಿ ಮುಂಜಾವು ಪತ್ರಿಕೆಯ ಪ್ರಧಾನ ಸಂಪಾದಕ ಗಂಗಾಧರ ಹಿರೇಗುತ್ತಿ ಕರೆ ನೀಡಿದರು.

ಅಮದಳ್ಳಿ ಜಾನಪದ ಉತ್ಸವದ ಎರಡನೇ ದಿನವಾದ ಶನಿವಾರದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಜನರನ್ನು ಸಂಘಟಿಸುವುದು ಸುಲಭದ ಮಾತಲ್ಲ. ಆದರೆ ಸಂಘಟನೆ ಎನ್ನುವುದನ್ನು ಈ ಉತ್ಸವ ಸಮಿತಿಯವರಿಂದ ಕಲಿತುಕೊಳ್ಳಬೇಕು ಎಂದರು.
ಜಾನಪದ ಎನ್ನುವುದು ಗ್ರಾಮದ ದೇವರಿದ್ದಂತೆ. ಅದನ್ನು ಎಷ್ಟು ಗೌರವಿಸುತ್ತೇವೋ ಅಷ್ಟು ಸಂಸ್ಕೃತಿ, ಶಿಸ್ತು ನಮ್ಮಲ್ಲಿ ಬೆಳೆಯುತ್ತದೆ. ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿ, ಕರಾವಳಿ ಉತ್ಸವವನ್ನು ಮೀರಿಸುವಂಥ ಕಾರ್ಯಕ್ರಮ ಇದು.‌ ಇಂಥ ಕಾರ್ಯಕ್ರಮ ಗ್ರಾಮೀಣ ಮಟ್ಟದಲ್ಲಿ ನಡೆಯುತ್ತಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಇಂಥ ಕಾರ್ಯಕ್ರಮಗಳನ್ನು ರಾಜಕೀಯೇತರವಾಗಿ ಎಲ್ಲರೂ ಬೆಂಬಲಿಸಬೇಕು
ಎಂದರು.

ನಾನು ಇತ್ತೀಚೆಗೆ ರಾಜಕೀಯಕ್ಕೆ ಮರು ಪ್ರವೇಶ ಮಾಡಿರುವುದು ಕೂಡ ಇಂಥ ಯುವಜನತೆಗಾಗಿ. ಇಂಥವರಿಗಾಗಿ ನಾನು ಏನು ಮಾಡಲು ಕೂಡ ಸಿದ್ಧನಿದ್ದೇನೆ‌. ಈ ಅಮದಳ್ಳಿ ಗ್ರಾಮ ನನ್ನ ಕುಟುಂಬಕ್ಕೆ ಅನ್ನ ನೀಡಿದೆ. ತಂದೆಯ ಕಾಲಾವಧಿಯ ನಂತರ ನನಗಿಂತ ನನ್ನ ಕುಟುಂಬವನ್ನು ಈ ಗ್ರಾಮ ಬೆಂಬಲಿಸಿದೆ. ನನ್ನ ಕೊನೆಯವರೆಗೂ ಈ ಗ್ರಾಮವನ್ನು ನಾನು ಎಂದಿಗೂ ಕೈಬಿಡುವುದಿಲ್ಲ. ಮುಂದಿನ ದಿನದಲ್ಲಿಯೂ ಇಲ್ಲಿನ ಕಾರ್ಯಕ್ರಮಗಳಿಗೆ ನಾನು ನೆರವಾಗಿರುತ್ತೇನೆ. ರಾಜಕೀಯೇತರವಾಗಿಯೂ ಕೂಡ ಪ್ರತಿವರ್ಷ ಈ ಉತ್ಸವಕ್ಕೆ ನನ್ನ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಾಘೋಬ ಶೇಟ್, ನಾಟಿ ಔಷಧಿ ನೀಡುವ ಪದ್ಮಾವತಿ ಆದಾರಿ, ಜಾನಪದ ಕ್ಷೇತ್ರದ ಸಾಧನೆಗಾಗಿ ಆಮಾಷ್ಯ ಗೌಡ, ಧಾರ್ಮಿಕ ಸೇವೆಯಲ್ಲಿ ವಾಮನ್ ಆಣೇರ, ಶಿಕ್ಷಣ ಕ್ಷೇತ್ರದಲ್ಲಿ ಸುಮಿತ್ರಾ ಗಾಯಕ, ಸಾಮಾಜಿಕ ಸೇವೆಯಲ್ಲಿ ಗಿರಿಯಾ ಉಮಾ ಹರಿಕಂತ್ರ ಅವರನ್ನು ಸನ್ಮಾನಿಸಲಾಯಿತು.

ಉತ್ಸವದ ನಿಮಿತ್ತ ಆಯೋಜಿಸಿದ್ದ ಗ್ರಾಮೀಣ ಸ್ಪರ್ಧೆಗಳ ಪುರುಷರ ವಿಭಾಗದ ಗಾಳಿಪಟ ಸ್ಪರ್ಧೆಯಲ್ಲಿ ಸಂತೋಷ್ ತಾಂಡೇಲ ಪ್ರಥಮ, ರಾಜೇಶ ಮಡಿವಾಳ ದ್ವಿತೀಯ, ರವಿ ಗುಣಿಯಾ ಗೌಡ ತೃತೀಯ, ಮೂರು ಕಾಲಿನ ಓಟದಲ್ಲಿ ಅಭಿಷೇಕ ಮಡಿವಾಳ ಮತ್ತು ಸುದರ್ಶನ ಗೌಡ ಪ್ರಥಮ, ನಾಗರಾಜ ಅಂಬಿಗ ಮತ್ತು ರಾಜೇಶ ಅವರ್ಸೇಕರ್ ದ್ವಿತೀಯ, ಸಚಿನ್ ಮತ್ತು ಪ್ರಶಾಂತ್ ತೃತೀಯ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಜೈಮಾರುತಿ ಮುದಗಾ ತಂಡ ಪ್ರಥಮ, ಶ್ರೀಮಾರುತಿ ಚಿತ್ತಾಕುಲ ತಂಡ ದ್ವಿತೀಯ ಬಹುಮಾನ ಪಡೆದರು.

RELATED ARTICLES  ಶಾಲೆಗೆ ಹೊರಟ ವಿದ್ಯಾರ್ಥಿನಿ ಅಪಹರಿಸಿ ಮದುವೆಯಾದವನಿಗೆ : ಕಠಿಣ ಶಿಕ್ಷೆ ವಿಧಿಸಿದ ಕೋರ್ಟ.

ಮಹಿಳಾ ವಿಭಾಗದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ವಿ.ಎಂ ಪ್ರಥಮ, ಸುಮತಿ ಗೌಡ ದ್ವಿತೀಯ, ತೇರೆ ಗೌಡ ತೃತೀಯ, ಸಂಗೀತ ಕುರ್ಚಿಯಲ್ಲಿ ಮಾಲಾ ದುರ್ಗೇಕರ್ ಪ್ರಥಮ, ಪ್ರಯಾಂಕ ದೀವಳಿ ದ್ವಿತೀಯ, ಸವಿತಾ ಪಡ್ತಿ ತೃತೀಯ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸಿದ್ಧರಾಮೇಶ್ವರ ಬಿಣಗಾ ತಂಡ ಪ್ರಥಮ, ನವಚಂಡಿಕಾ ಅಮದಳ್ಳಿ ತಂಡ ದ್ವಿತೀಯ, ಚಿಕ್ಕ ಮಕ್ಕಳಿಗಾಗಿ ಆಯೋಜಿಸಿದ್ದ ಗೋಣಿ ಚೀಲ ಓಟದಲ್ಲಿ ಕೀರ್ತಿಕ ಗೌಡ ಪ್ರಥಮ, ಕವನಾ ನಾಯ್ಕ ದ್ವಿತೀಯ, ಕೃತಿಕಾ ನಾಯ್ಕ ತೃತೀಯ ಬಹುಮಾನ ಪಡೆದರು.
ಬಹುಮಾನಿತರಿಗೆ ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಬಹುಮಾನ ವಿತರಿಸಿದರು.
ಕಾಮಿಡಿ ಕಿಲಾಡಿಗಳು ಹಾಗೂ ರೋಬೋ ಫ್ಯಾಮಿಲಿ ಖ್ಯಾತಿಯ ಸದಾನಂದ ಕಾಳೆ, ಶ್ರೀಶೈಲ ಹೂಗಾರ ಮತ್ತು ದೇವರಾಜ್ ತಂಡದವರಿಂದ ನಗೆ ಹಬ್ಬ, ಚಲನಚಿತ್ರ ನಟಿ ಜಯಶ್ರೀ, ಮಂಡ್ಯ ಜಯರಾಂ ಮತ್ತು ಜೂ.ವಿಷ್ಣುವರ್ಧನ ಅವರನ್ನೊಳಗೊಂಡ ಬೆಂಗಳೂರಿನ ರೇಣುಕಾಂಬಾ ಕಲಾ ಸಂಘದವರಿಂದ ಕಿವುಡ ಮಾಡಿದ ಕಿತಾಪತಿ ನಗೆ ನಾಟಕಗಳು ನಡೆದವು. ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ಹಾಗೂ ಕಿರುತೆರೆ ನಟಿ ಸೋನು ಪಾಟೀಲ್ ಆಗಮಿಸಿದ್ದರು.
ಜಾನಪದ ಉತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗೌಡ ಸ್ವಾಗತಿಸಿದರು. ತೋಕು ಹರಿಕಂತ್ರ ನಿರೂಪಿಸಿದರು. ಪತ್ರಕರ್ತ ಪ್ರಶಾಂತ ಮಹಾಲೆ ವಂದಿಸಿದರು.